ರಾಯಚೂರಿನ ಕೃಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕಥಾ ಕಮ್ಮಟದಲ್ಲಿ ಸಾಹಿತಿ ಮಹಾಂತೇಶ ನವಲಕಲ್ ಭಾನುವಾರ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಸಾಹಿತಿ ಶರಣಬಸವ ಗುಡದಿನ್ನಿ ಇದ್ದರು.  
ಜಿಲ್ಲೆ

ಕಥೆಗಳಿಂದ ಭಾಷೆ ಉಳಿಸುವ ಕೆಲಸವಾಗುತ್ತಿದೆ

ರಾಚಯ್ಯ ಸ್ವಾಮಿ

ರಾಯಚೂರು: ಕಥೆಗಳು ಆಯಾ ಭಾಷೆಗಳನ್ನು ಉಳಿಸುವ ಹಾಗೂ ಆ ಕಾಲಘಟ್ಟದ ಇತಿಹಾಸವನ್ನು ತಿಳಿಸುವ ಕೆಲಸ ಮಾಡುತ್ತಿದ್ದು, ಕಲಿಯ ಬೇಕು ಎನ್ನುವ ಮನೋಭಾವವಿದ್ದಾಗ ಮಾತ್ರ ಉತ್ತಮ ಕಥೆ ಕಟ್ಟುವ ಹುಮ್ಮಸ್ಸು ಬರುತ್ತದೆ ಎಂದು ಸಾಹಿತಿ ಮಹಾಂತೇಶ ನವಲಕಲ್ ಹೇಳಿದರು.
ಸ್ಥಳೀಯ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಏರ್ಪಡಿಸಿರುವ ಜಿಲ್ಲಾ ಮಟ್ಟದ ಕಥಾ ಕಮ್ಮಟದಲ್ಲಿ ಸಮಕಾಲೀನ ಜಗತ್ತು ಮತ್ತು ಕಥಾ ಚೌಕಟ್ಟು ಕುರಿತು ಭಾನುವಾರ ಮಾತನಾಡಿ, ಕಥೆ ಅಗಾಧತೆಯನ್ನು ಬಯಸುತ್ತದೆ ಎಂದರು.
ಜ್ಞಾನವನ್ನು ಕಥೆಯನ್ನಾಗಿ ಪರಿವರ್ತಿಸಲು ಸಾಕಷ್ಟು ಶ್ರಮ ಬೇಕಾಗುತ್ತದೆ. ಜ್ಞಾನ ಬೇರೆ ಬೇರೆ ರೂಪಗಳಲ್ಲಿರುತ್ತಿದದು, ಕಥೆ ಹರಿಯುವ ನದಿಯಂತಿದ್ದು, ಜ್ಞಾನವನ್ನು ಯಾವ ರೀತಿಯಲ್ಲಿ ಅರಿತುಕೊಂಡು ಹೇಳುತ್ತೀರಿ ಎನ್ನುವುದರ ಮೇಲೆ ಕಥೆಯ ಗಂಭೀರತೆ ನಿರ್ಧಾರವಾಗುತ್ತದೆ.
ಎಲ್ಲ ಕಾಲಘಟ್ಟದಲ್ಲಿ ರಾಯಚೂರು ಜಿಲ್ಲೆಯ ಕಥೆಗಾರರಿಂದ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಲಾಗಿದೆ. ಶಾಂತರಸರಿಂದ ಹಿಡಿದು ಇಂದಿನ ಪೀಳಿಗೆಯ ಕಥೆಗಾರರು ಹಾಗೂ ಇನ್ನಿತರ ಪ್ರಕಾರಗಳ ಸಾಹಿತಿಗಳು ಕ್ಷೇತ್ರದಲ್ಲಿ ಉತ್ತಮ ಕೃಷಿ ಮಾಡುವ ಮೂಲಕ ಜಿಲ್ಲೆಗೆ ಹೆಸರು ತಂದಿದ್ದಾರೆ ಎಂದು ಮಹಾಂತೇಶ ನವಲಕಲ್ ಹೇಳಿದರು.
ಈ ಸಂದರ್ಭದಲ್ಲಿ ಸಾಹಿತಿ ಶರಣಬಸವ ಗುಡದಿನ್ನಿ ಸಣ್ಣ ಕಥೆಗಳ ರಚನೆ ಕುರಿತು ಮಾಹಿತಿ ನೀಡಿದರು. ನಂತರ ಸಂಪನ್ಮೂಲ ವ್ಯಕ್ತಿಗಳಿಂದ ಶಿಬಿರಾರ್ಥಿಗಳೊಂದಿಗೆ ಸಂವಾದ ಜರುಗಿತು. ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಸಾಹಿತಿಗಳಾದ ವೀರಹನುಮಾನ, ಡಾ.ಬಿ.ಎಂ.ಶರಭೇಂದ್ರಸ್ವಾಮಿ ಉಪಸ್ಥಿತರಿದ್ದರು.