ಚಿತ್ರದುರ್ಗ: ಕಥಾ ಪರಂಪರೆ ನಾಡಿನ ಎಲ್ಲ ಸಾಹಿತ್ಯ ಚಳವಳಿಗಳಲ್ಲೂ ಅತ್ಯಂತ ಪ್ರಸಿದ್ಧವಾದ ಪ್ರಾಕಾರವಾಗಿದೆ ಎಂದು ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ.ಬಿ.ಆರ್. ರವಿಕಾಂತೇಗೌಡ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮೈತ್ರಿ ಪುಸ್ತಕ ಮನೆ, ಅಂಬೇಡ್ಕರ್ ಮತ್ತು ಲಂಕೇಶ್ ವಿಚಾರ ವೇದಿಕೆಯಿಂದ ಪತ್ರಿಕಾ ಭವನದ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಡೇಕುಂಟೆ ಮಂಜುನಾಥ್ ಅವರ ಕಾಡು ಕಾಯುವ ಮರ ಕಥಾ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನವೋದಯದ ಮಾಸ್ತಿ, ಕುವೆಂಪು, ಪ್ರಗತಿಶೀಲ ನಿರಂಜನ, ಆನಕೃ, ಲಂಕೇಶ್, ಅನಂತಮೂರ್ತಿ, ದಲಿತ ಬಂಡಾಯದ ದೇವನೂರು ಮಹಾದೇವ, ಕನ್ನಡದ ಮೊದಲ ಕತೆಗಾರ್ತಿ ಕೊಡಗಿನ ಗೌರಮ್ಮ ಇವರೆಲ್ಲ ನಮ್ಮ ಸಾಹಿತ್ಯ ಲೋಕದ ದಿಗ್ಗಜರು. ಈ ಮಾರ್ಗದಲ್ಲಿ ಹಾದುಹೋದವರು ಸೃಜನಶೀಲ ಬರಹಗಳನ್ನು ನೀಡಬಲ್ಲರು ಎಂದು ಸಲಹೆ ನೀಡಿದರು.
ಕನ್ನಡದ ಘನ ಕಥಾ ಪರಂಪರೆಗೆ ಶತಮಾನಕ್ಕೂ ಹೆಚ್ಚು ಇತಿಹಾಸವಿದೆ. ಅರಿವಿನ ಜೊತೆಗೆ ಮನಸ್ಸಿಟ್ಟು ಓದಿದವರು ಮಹತ್ವದ ಕೃತಿಗಳನ್ನು ರಚಿಸಬಲ್ಲರು. ಸಮೂಹ ವಿವೇಕ ನಿರಾಕರಿಸುವ ಕಾಲಘಟ್ಟದಲ್ಲಿದ್ದು, ಅದನ್ನು ಒಗ್ಗೂಡಿಸುವ ಕ್ರಿಯಾಶೀಲತೆ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಮಂಜುನಾಥ್ ಅವರ ಅಪ್ಪನ ತಪ್ಪಡಿ, ದೇಗುಲದ ಗಂಟೆ ಮೊಳಗಲಿಲ್ಲ ಕಥೆಗಳಲ್ಲಿ ಜಾತಿ ವ್ಯವಸ್ಥೆ ಕುರಿತ ಮನೋಭಾವ ವ್ಯಕ್ತವಾಗಿದೆ. ಪ್ರಜಾಪ್ರಭುತ್ವ ಪ್ರೀತಿಸುವ, ಜಾತ್ಯತೀತವಾಗಿರಬೇಕೆಂಬ ಭಾವನೆ ಸಮೂಹವನ್ನು ಸ್ಪರ್ಶಿಸುವಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಕರ್ತ ಜಿ.ಎನ್. ಮೋಹನ್ ಕಥಾ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿ, ಪತ್ರಕರ್ತರು ಕಥೆಗಾರರಾದಾಗ ಅವುಗಳ ಸ್ವರೂಪ, ಸಾಮಾಜಿಕತೆ ಮತ್ತು ಪರಿಭಾಷೆ ಹೆಚ್ಚು ತೀವ್ರವಾಗುತ್ತದೆ. ಜಡೇಕುಂಟೆ ಮಂಜುನಾಥ್ ಅವರ ಈ ಕೃತಿ ತುಂಬಾ ವಿಶಿಷ್ಟವಾದದ್ದು. ಆರಂಭದಿಂದಲೂ ಅವರ ಬರಹಗಳನ್ನು ಗಮನಿಸಿದ್ದೇನೆ. ಅವರಿಂದ ಕನ್ನಡದ ಬರಹ ಪರಂಪರೆಗೆ ಇನ್ನಷ್ಟು ಮೌಲಿಕ ಕೊಡುಗೆ ನಿರೀಕ್ಷಿಸಬಹುದಾಗಿದೆ ಎಂದರು.
ಲೇಖಕಿ ಪಿ. ಭಾರತೀದೇವಿ ಮಾತನಾಡಿ, ಬಯಲುಸೀಮೆಯ ಪ್ರಾದೇಶಿಕ ಸೊಗಡನ್ನು ಬರಹಗಾರರು ತಮ್ಮ ಕಥೆಗಳಲ್ಲಿ ಸಮರ್ಥವಾಗಿ ಹಿಡಿದಿಟ್ಟಿದ್ದಾರೆ. ಶಕ್ತವಾದ ಸ್ತ್ರೀ ಪಾತ್ರಗಳನ್ನು ಸೃಜಿಸಿದ್ದಾರೆ ಎಂದು ವಿಶ್ಲೇಷಿಸಿದರು.
ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, ನಮ್ಮಲ್ಲಿ ತುಂಬಾ ಮಂದಿ ಉತ್ತಮ ಬರಹಗಾರರಿದ್ದಾರೆ. ಗ್ರಾಮೀಣ ಹಿನ್ನೆಲೆಯ ಅನುಭವವನ್ನು ಈ ಕಥಾ ಸಂಕಲನದಲ್ಲಿ ಮಂಜುನಾಥ್ ದಾಖಲಿಸಿದ್ದಾರೆ. ಸಾಮಾಜಿಕ ಕಳಕಳಿಯ ಬರಹಗಳನ್ನು ಹೀಗೆ ಮುಂದುವರಿಸಲಿ ಎಂದು ಆಶಿಸಿದರು.
ಎಸ್ಪಿ ರಂಜಿತ್‌ಕುಮಾರ್ ಬಂಡಾರು, ವ್ಯಂಗ್ಯಚಿತ್ರ ಕಲಾವಿದ ಬಿ.ಜಿ. ಗುಜ್ಜಾರಪ್ಪ, ಉಪನ್ಯಾಸಕ ಆರ್. ಮಂಜುನಾಥ್ ಕೂಡ್ಲಿಗಿ, ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್. ಅಹೋಬಳಪತಿ, ಸಂಘದ ಅಧ್ಯಕ್ಷ ಬಿ. ದಿನೇಶ್‌ಗೌಡಗೆರೆ ವೇದಿಕೆಯಲ್ಲಿದ್ದರು.
ನವೀನ್ ಮಸ್ಕಲ್, ವಿನಾಯಕ ತೊಡರನಾಳ್, ಸಿ.ರಾಜಶೇಖರ್, ದರ್ಶನ್ ಇಂಗಳದಾಳ್, ವೀರೇಶ್, ಡಿ.ಒ. ಮುರಾರ್ಜಿ, ಸ.ರಾ. ಲೇಪಾಕ್ಷ ಇತರರಿದ್ದರು.