ಜಿಲ್ಲೆ

ಕತ್ತು ಹಿಸುಕಿ ಪತ್ನಿ ಕೊಂದ ಆರೋಪ: ಪತಿ ಬಂಧನ

ಮೈಸೂರು: ಸಾಲ ತೀರಿಸಲು ಹಣ ನೀಡದ ಪತ್ನಿಯ ಕತ್ತು ಹಿಸುಕಿ ಕೊಂದ ಆರೋಪದ ಮೇಲೆ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜೀವ್‌ನಗರದ ನವೀದಾಬಿ (38)ಮೃತರು. ಪತಿ ಮಂಡ್ಯ ಮೂಲದ ಅಕ್ಬರ್ ಅಲಿ ಬಂಧಿತ ಆರೋಪಿ.
ನವೀದಾಬಿಯನ್ನು 13 ವರ್ಷಗಳ ಹಿಂದೆ ಆಟೋ ಚಾಲಕನಾಗಿರುವ ಅಕ್ಬರ್ ಅಲಿ ಮದುವೆಯಾಗಿದ್ದು, ಮೂವರು ಮಕ್ಕಳು ಇದ್ದಾರೆ. ಇತ್ತೀಚೆಗೆ ಅಕ್ಬರ್ ಅಲಿಗೆ ಹೃದಯಾಘಾತವಾಗಿದ್ದರಿಂದ ಅತ್ತೆ ಮನೆಯವರೇ ಚಿಕಿತ್ಸೆ ಕೊಡಿಸಿ ಮನೆಯಲ್ಲಿ ಇರಿಸಿಕೊಂಡಿದ್ದರು. ಅಲ್ಲದೆ ಜೀವನೋಪಾಯಕ್ಕಾಗಿ ಗೂಡ್ಸ್ ಆಟೋ, ಪ್ರಾವಿಷನ್ ಸ್ಟೋರ್ಸ್‌, ಆಟೋ ಮೊಬೈಲ್ ಅಂಗಡಿ ಸೇರಿದಂತೆ ಇನ್ನಿತರ ವ್ಯಾಪಾರಕ್ಕಾಗಿ ಹಣವನ್ನು ನೀಡಿದ್ದರು ಎನ್ನಲಾಗಿದೆ. ಆದರೂ ಮತ್ತಷ್ಟು ಸಾಲ ಮಾಡಿಕೊಂಡು ಸಾಲ ತೀರಿಸಲು ಹಣ ನೀಡುವಂತೆ ಪತ್ನಿ ಹಾಗೂ ಆಕೆ ಮನೆಯವರನ್ನು ಒತ್ತಾಯಿಸುತ್ತಿದ್ದನು. ಪತ್ನಿ ಸಹ ಕೆಲಸ ಮಾಡಿ ತಂದ ಹಣವನ್ನು ಪತಿಗೆ ನೀಡುತ್ತಿದ್ದರೂ ಹಣದ ದಾಹ ತೀರಿರಲಿಲ್ಲ. ಇದೇ ವಿಚಾರವಾಗಿ ದಂಪತಿ ನಡುವೆ ಗಲಾಟೆ ನಡೆದು ಭಾನುವಾರ ರಾತ್ರಿ ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪತ್ನಿ ಮನೆಯವರು ನೀಡಿದ ದೂರಿನ ಮೇರೆಗೆ ಉದಯಗಿರಿ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.