ಶ್ರೀನಿವಾಸಪುರ : ತಾಲೂಕಿನ ಪಾಳ್ಯ ಗ್ರಾಮದಲ್ಲಿ ಮಹಿಳೆಯೊಬ್ಬರ ಕತ್ತು ಕೊಯ್ದು ಕೊಲೆ ಮಾಡಲಾಗಿದ್ದು, ಕೊಲೆ ನಡೆದ 6 ಗಂಟೆಯಲ್ಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಾಳ್ಯದ ಶ್ರೀರಾಮರೆಡ್ಡಿ ಅವರ ಪತ್ನಿ ರೂಪಾ(38) ಕೊಲೆಯಾದ ಮಹಿಳೆ. ಆನಂದಪ್ಪ ನಾಯಕ್(48) ಬಂಧಿತ.
ರೂಪಾ ಸೋಮವಾರ ಮಧ್ಯಾಹ್ನ ಗ್ರಾಮದ ಹೊರವಲಯದಲ್ಲಿ ಹಸು ಮೇಯಿಸಲು ಹೋಗಿದ್ದರು. ಆದರೆ, ಸಂಜೆಯಾದರೂ ಮನೆಗೆ ವಾಪಸ್ ಬಾರದ ಹಿನ್ನೆಲೆಯಿಂದ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ ಚುರುವುನಹಳ್ಳಿ ಕಾಲುವೆ ಸಮೀಪ ಮಹಿಳೆ ರಕ್ತದ ಮಡುವಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಕುಟುಂಬಸ್ಥರ ಮಾಹಿತಿ ಮೇರೆಗೆ ಪೊಲೀಸರು ಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊಲೆ ಎಂಬ ಶಂಕೆ ಮೇರೆಗೆ ಕೋಲಾರ ಎಸ್ಪಿ ನಿಖಿಲ್ ಹಾಗೂ ಡಿವೈಎಸ್ಪಿ ನಂದಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿ, ಪೊಲೀಸ್ ಇನ್ಸ್ಪೆಕ್ಟರ್ ಗೊರವನಕೊಳ್ಳ, ಸಬ್ ಇನ್ಸ್ಪೆಕ್ಟರ್ ಜೈರಾಮ್ ತಂಡದಿಂದ ಆರೋಪಿ ಆನಂದಪ್ಪ ನಾಯಕ್ ಎಂಬುವವರನ್ನು ಬಂಧಿಸಿದ್ದಾರೆ.
ಅಕ್ರಮ ಸಂಬಂಧ ಕಾರಣ: ಪೊಲೀಸರು ಮೊದಲಿಗೆ ಮೊಬೈಲ್ ಕಾಲ್ ತನಿಖೆ ಒಳಪಡಿಸಿದಾಗ ಕೊಲೆ ಆರೋಪಿ ಸುಳಿವು ಸಿಕ್ಕಿದ್ದು, ಅದೇ ಗ್ರಾಮದ ಆನಂದಪ್ಪ ನಾಯಕ್(48) ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಇದೇ ವಿಚಾರಕ್ಕೆ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ ಎನ್ನಲಾಗಿದೆ.
ಪತ್ನಿ ರೂಪಾಗೆ ಸೋಮವಾರ ಮಧ್ಯಾಹ್ನ 3.10 ನಿಮಿಷಕ್ಕೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಡ್ ಆ್ ಆಗಿತ್ತು. ಆದರೆ, ಪತ್ನಿ ಹಾಗೂ ಆನಂದಪ್ಪ ನಾಯಕ್ ಜತೆಗೆ ಹಣದ ವ್ಯವಹಾರ ಇತ್ತು. ಕೊಲೆ ಯಾವ ವಿಚಾರಕ್ಕೆ ನಡೆದಿದೆ ಎಂಬುದು ಪೊಲೀಸರ ತನಿಖೆ ನಂತರ ತಿಳಿಯಬೇಕಿದೆ.
| ಶ್ರೀರಾಮರೆಡ್ಡಿ, ಮೃತ ಮಹಿಳೆ ಪತಿ