ಮಳವಳ್ಳಿ ಪಟ್ಟಣದ ಮುಖ್ಯರಸ್ತೆಯಲ್ಲಿ ಬೀದಿ ದೀಪಗಳು ಕೆಟ್ಟಿರುವುದರಿಂದ ಕಗ್ಗತ್ತಲೆಯಲ್ಲಿ ಜನರು ಸಂಚರಿಸುತ್ತಿರುವುದು. 
ಜಿಲ್ಲೆ

ಕತ್ತಲಿನಲ್ಲಿ ಮುಳುಗಿದೆ ಮಳವಳ್ಳಿ ಪಟ್ಟಣ

ಮಳವಳ್ಳಿ: ಪಟ್ಟಣದಲ್ಲಿ ಮುಖ್ಯರಸ್ತೆಗಳಲ್ಲಿ ಬೀದಿದೀಪಗಳು ಕೆಟ್ಟಿರುವುದರಿಂದ ಸಂಜೆಯಾಗುತ್ತಿದ್ದಂತೆ ಮಳವಳ್ಳಿ ಕತ್ತಲಿನಲ್ಲಿ ಮುಳುಗುವಂತಾಗಿದೆ.

ಕಳೆದ ಆರೇಳು ತಿಂಗಳಿನಿಂದ ಪಟ್ಟಣದ ಮುಖ್ಯರಸ್ತೆಗಳಲ್ಲಿ ಬೀದಿ ದೀಪವಿಲ್ಲದೇ ಸವಾರರು ತಮ್ಮ ವಾಹನದ ಬೆಳಕು ಹಾಗೂ ಪಾದಚಾರಿಗಳು ಮೊಬೈಲ್ ಟಾರ್ಚ್ ಗಳನ್ನು ಅವಲಂಬಿಸಿ ಸಂಚರಿಸುವಂತಾಗಿದೆ. ಮೊದಲೇ ಮಳೆಯ ಅವಾಂತರದಿಂದ ಪಟ್ಟಣದ ರಸ್ತೆಗಳು ಗುಂಡಿಮಯವಾಗಿದ್ದು, ಬೆಳಕು ಇಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗಿದೆ.

ಮೈಸೂರು ಮುಖ್ಯರಸ್ತೆಯಲ್ಲಿ ತಾಪಂ ಕಚೇರಿ ಬಳಿಯಿಂದ ಅನಂತ್ ರಾಮ್ ವೃತ್ತದವರೆಗೂ ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗುಂಡಿಗಳಾಗಿವೆ. ಹೀಗಾಗಿ ಬೀದಿ ದೀಪಗಳ ಬೆಳಕಿಲ್ಲದಿರುವುದರಿಂದ ರಾತ್ರಿ ವೇಳೆ ಗುಂಡಿಗಳು ಕಾಣದೆ ವಾಹನ ಸವಾರರು ಆಯತಪ್ಪಿ ಬಿದ್ದು ಅಥವಾ ಮತ್ತೊಬ್ಬರಿಗೆ ಡಿಕ್ಕಿ ಹೊಡೆದು ಗಾಯಾಳುಗಳಾಗಿ ಆಸ್ಪತ್ರೆ ಸೇರುತ್ತಿರುವ ಸನ್ನಿವೇಶಗಳು ನಿತ್ಯವೂ ನಡೆಯುತ್ತಿದೆ.

ಇತ್ತ ಸಾರಿಗೆ ಬಸ್ ನಿಲ್ದಾಣದಲ್ಲೂ ಸಮರ್ಪಕವಾಗಿ ಲೈಟ್‌ಗಳಿಲ್ಲದ ಕಾರಣ ಪ್ರಯಾಣಿಕರು ಭಯದಲ್ಲಿ ನಿಂತು ಬಸ್‌ಗಾಗಿ ಕಾದು ಕುಳಿತು ತೆರಳುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಬಸ್ ನಿಲ್ದಾಣದ ಶೌಚಗೃಹ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ರಾತ್ರಿಯಾಗುತ್ತಿದ್ದಂತೆ ಕುಡುಕರ ಅಡ್ಡೆ ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತನೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ಪುರಸಭೆ ಆಡಳಿತ ಪ್ರತಿವರ್ಷ ಬೀದಿದೀಪಗಳ ನಿರ್ವಹಣೆಗಾಗಿ 20 ಲಕ್ಷ ರೂ.ಗಳಿಗೂ ಹೆಚ್ಚು ಹಣವನ್ನು ಮೀಸಲಿಡುತ್ತಿದೆ. ಅಲ್ಲದೆ ಬೀದಿದೀಪಗಳ ದುರಸ್ತಿಗೆಂದು ಒಂದಕ್ಕೆ ಹತ್ತು ಪಟ್ಟು ಲೆಕ್ಕ ಬರೆದುಕೊಂಡು ಆಯವ್ಯಯ ಸಭೆಯಲ್ಲಿ ಮಂಡಿಸಿ ಮೀಸಲಿಟ್ಟ ಹಣವನ್ನು ಸರಿದೂಗಿಸಿಕೊಂಡು ದಾಖಲೆ ಸೇರಿಸಿಕೊಳ್ಳುವಷ್ಟು ಮುತುವರ್ಜಿ ವಹಿಸುವ ಅಧಿಕಾರಿಗಳಿಗೆ, ಬೀದಿದೀಪಗಳ ನಿರ್ವಹಣೆ ಮಾಡಲು ಕ್ರಮವಹಿಸುತ್ತಿಲ್ಲ.

ಪಟ್ಟಣದಲ್ಲಿ ಜರುಗುವ ಸಿಡಿ ಹಬ್ಬದ ಸಂದರ್ಭದಲ್ಲಿ ಮಾತ್ರ ಅಧಿಕಾರಿ ವರ್ಗ ಹೈಮಾಸ್ಟ್ ದೀಪಗಳನ್ನು ರಿಪೇರಿ ಮಾಡಿಸುತ್ತಾರೆ. ಆದರೆ ಅವುಗಳು ಕೆಲವು ದಿನಗಳಷ್ಟೇ ಬೆಳಕು ಚೆಲ್ಲಿ ಕಣ್ಮುಚ್ಚಿಕೊಳ್ಳುತ್ತಿವೆ. ಒಟ್ಟಾರೆ ಹಲವು ತಿಂಗಳಿನಿಂದ ಮುಖ್ಯರಸ್ತೆಯ ಬೀದಿ ದೀಪಗಳು ಬೆಳಕು ನೀಡದಿರುವ ಬಗ್ಗೆ ಪಟ್ಟಣದ ಯಾವೊಬ್ಬ ಪುರಪಿತೃಗಳು ಚಕಾರ ಎತ್ತದಿರುವುದಕ್ಕೆ ನಾಗರಿಕರು ಆಕ್ರೋಶಭರಿತರಾಗಿದ್ದಾರೆ.

ನಮ್ಮಲ್ಲಿ ಇಂಜಿನಿಯರ್ ಹುದ್ದೆಗಳು ಖಾಲಿ ಇರುವುದರಿಂದ ಮುಖ್ಯರಸ್ತೆಯ ಬೀದಿ ದೀಪಗಳ ದುರಸ್ತಿ ಕಾರ್ಯ ವಿಳಂಬವಾಗಿದೆ. ಟೆಂಡರ್ ಪ್ರಕ್ರಿಯೆ ನಡೆಸಿ ಇನ್ನೆರಡು ತಿಂಗಳಲ್ಲಿ ದುರಸ್ತಿ ಮಾಡಿಸಲಾಗುವುದು.

ಹರಿಪ್ರಸಾಸ್, ಮುಖ್ಯಾಧಿಕಾರಿ, ಪುರಸಭೆ.

ಬೀದಿದೀಪಗಳ ರಿಪೇರಿಗಾಗಿ ಜಿಲ್ಲಾಧಿಕಾರಿಗಳಿಂದ ಪುರಸಭೆ ಅನುದಾನ ಬಳಕೆಗೆ ಅನುಮತಿ ಪಡೆಯಲಾಗಿದೆ. ಮುಖ್ಯರಸ್ತೆಗಳಲ್ಲಿರುವ ಎಲ್‌ಇಡಿ ವಿದ್ಯುತ್ ದೀಪಗಳ ದುರಸ್ತಿ ಕಾರ್ಯಕ್ಕಾಗಿ ಸ್ಥಳೀಯ ಕಾರ್ಖಾನೆಗಳಲ್ಲಿ ಮೀಸಲಿಟ್ಟಿರುವ ಅನುದಾನ ನೀಡುವಂತೆ ಹಲವು ಕಾರ್ಖಾನೆಗಳಿಗೆ ಪತ್ರ ಬರೆಯಲಾಗಿದೆ. ಕೆಲವು ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿ ದುರಸ್ತಿ ಪಡಿಸಲಾಗುವುದು.

ಟಿ.ನಂದಕುಮಾರ್, ಪುರಸಭೆ ಸದಸ್ಯ.

ಆರೇಳು ತಿಂಗಳಿನಿಂದ ಮೈಸೂರು ಮುಖ್ಯರಸ್ತೆಯಲ್ಲಿರುವ ಬೀದಿ ದೀಪಗಳು ಕೆಟ್ಟು ನಿಂತಿವೆ. ಈ ಬಗ್ಗೆ ಹಲವು ಬಾರಿ ಪುರಸಭೆ ಅಧಿಕಾರಿಗಳು ಹಾಗೂ ಸದಸ್ಯರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈ ಕೂಡಲೇ ರಿಪೇರಿ ಮಾಡಿಸದಿದ್ದರೆ ಸಾರ್ವಜನಿಕರ ಜತೆಗೂಡಿ ಪುರಸಭೆ ಮುಂದೆ ಪ್ರತಿಭಟನೆ ನಡೆಸಲಾಗುವುದು.

ಕೃಷ್ಣಪ್ಪ, ಕಾರು ಚಾಲಕರ ಸಂಘದ ನಿರ್ದೇಶಕ, ಮಳವಳ್ಳಿ

ಸ್ಟ್ರೀಟ್ ಲೈಟ್‌ಗಳು ಇಲ್ಲದಿರುವುದರಿಂದ ರಾತ್ರಿಯಾಗುತ್ತಿದ್ದಂತೆ ಸಾರಿಗೆ ಬಸ್ ನಿಲ್ದಾಣದ ಸುತ್ತಲೂ ಪುಂಡಾಟ ಕಾಟ ಹೆಚ್ಚಾಗಿದೆ. ಪಟ್ಟಣದ ಮುಖ್ಯರಸ್ತೆಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಜನರ ಆಕ್ರೋಶ ಹೋರಾಟಕ್ಕೆ ತಿರುಗುವ ಮೊದಲು ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಳ್ಳಲಿ.

ಶಂಕರ್, ನಾಗರಿಕ ಮಳವಳ್ಳಿ