ಜಿಲ್ಲೆ

ಕುಂತೂರು ಬೆಟ್ಟದಲ್ಲಿ ಚಿರತೆ ಪತ್ಯಕ್ಷ

ಯಳಂದೂರು: ಸಮೀಪದ ಕುಂತೂರು ಬೆಟ್ಟದಲ್ಲಿ ಶುಕ್ರವಾರ ಮಧ್ಯಾಹ್ನ ಮತ್ತೆ ಚಿರತೆ ಕಾಣಿಸಿಕೊಂಡಿದ್ದು, ಮೂರು ಮೇಕೆಗಳ ಮೇಲೆ ದಾಳಿ ಮಾಡಿ ಸಾಯಿಸಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.


ಕಳೆದ ಜುಲೈನಲ್ಲಿ ತಾಲೂಕಿನ ಮಲ್ಲಿಗೆಹಳ್ಳಿ ಗ್ರಾಮದಲ್ಲಿ ಬಾಲಕಿ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ನಂತರ ಕೆಸ್ತೂರು, ಕಿನಕಹಳ್ಳಿ ಬಳಿ ಕಾಣಿಸಿ ಸಮೀಪದ ಕುಂತೂರು ಗುಡ್ಡದಲ್ಲಿ ನೆಲೆಸಿತ್ತು, ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಹಿಡಿದಿದ್ದರು. ಈಗ ಮತ್ತೆ ಈ ಗುಡ್ಡದಲ್ಲೇ ಚಿರತೆ ಕಾಣಿಸಿಕೊಂಡಿದೆ. ಕುಂತೂರು ಗ್ರಾಮದ ಮದೇಶ್‌ನಾಯಕ ಅವರಿಗೆ ಸೇರಿದ 2 ಮತ್ತು ಪ್ರಭುಸ್ವಾಮಿ ಅವರಿಗೆ ಸೇರಿದ ಒಂದು ಮೇಕೆ ಸೇರಿದಂತೆ ಒಟ್ಟು ಮೂರು ಮೇಕೆಗಳ ಮೇಲೆ ದಾಳಿ ನಡೆಸಿದ್ದು ಮೂರು ಮೇಕೆಗಳು ಮೃತಪಟ್ಟಿವೆ.


ಈಗ ಇದೇ ಚಿರತೆ ಮತ್ತೆ ಇಲ್ಲಿ ಬಂದಿರಬಹುದೆ ಅಥವಾ ಬೇರೆಯದೇ ಎಂಬುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಕಳೆದ ಬಾರಿ ಸೆರೆಯಾದ ಚಿರತೆ ಮಲೆ ಮಹದೇಶ್ವರ ಅರಣ್ಯ ವಲಯದಲ್ಲಿ ಒಂದು ಬಲಿ ಪಡೆದಿತ್ತು. ಹಾಗಾಗಿ ಜನರ ಆತಂಕ ಹೆಚ್ಚಲು ಇದೂ ಪ್ರಮುಖ ಕಾರಣವಾಗಿದೆ. ಕೂಡಲೇ ಅರಣ್ಯ ಇಲಾಖೆಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.


ಈ ಬಗ್ಗೆ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಕೊಳ್ಳೇಗಾಲ ಬಫರ್ ಜೋನ್ ವಿಭಾಗದ ಡಿಆರ್‌ಎಫ್‌ಒ ದೀಪಕ್ ಅವರು ಮಾಹಿತಿ ನೀಡಿ ಶುಕ್ರವಾರ ಚಿರತೆ ದಾಳಿ ಮಾಡಿ ಮೇಕೆಗಳನ್ನು ಬಲಿ ಪಡೆದಿದೆ. ಮೇಕೆಗಳನ್ನು ಮರಣೋತ್ತರ ಪರೀಕ್ಷೆ ಒಳಪಡಿಸಲು ಕ್ರಮ ವಹಿಸಲಾಗಿದೆ. ಅಲ್ಲದೇ ಶುಕ್ರವಾರ ರಾತ್ರಿ ನಮ್ಮ ಸಿಬ್ಬಂದಿ ಅಲ್ಲೇ ಠಿಕಾಣಿ ಹೊಡಲಿದ್ದಾರೆ. ಶನಿವಾರ ಬೋನು ಇರಿಸಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.