ಜಿಲ್ಲೆ

ಕಣ್ಮರೆಯಾಗುತ್ತಿರುವ ರಂಗಭೂಮಿ ಕಲೆ

ಮಳವಳ್ಳಿ: ಪೂರ್ವಜರು ಮನರಂಜನೆಗಾಗಿ ಪ್ರೋತ್ಸಾಹಿಸಿ ಕಟ್ಟಿ ಬೆಳೆಸಿದ ರಂಗಭೂಮಿ ಕಲೆ ಕಣ್ಮರೆಯಾಗುತ್ತಿರುವುದರ ಜತೆಗೆ ರಂಗ ಕಲೆಯನ್ನೇ ಜೀವನವನ್ನಾಗಿಸಿಕೊಂಡು ಪೋಷಿಸಿದ ಕಲಾವಿದರ ಬದುಕು ಸಂಕಷ್ಟದ ಸ್ಥಿತಿಯಲ್ಲಿದೆ ಎಂದು ಹಿರಿಯ ಕಾನಪದ ಕಲಾವಿದ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಸಿಎಂ ನರಸಿಂಹಮೂರ್ತಿ ಕಳವಳ ವ್ಯಕ್ತಪಡಿಸಿದರು.


ತಾಲೂಕಿನ ಪೂರಿಗಾಲಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಜೈ ಭೀಮ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ರಂಗ ಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ರಂಗ ಕಲೆ ಅಳಿವಿನ ಅಂಚಿನಲ್ಲಿದ್ದು, ಕಲಾವಿದರ ಬದುಕು ತುಂಬಾ ಸೋಚನೀಯವಾಗಿದೆ. ನಮ್ಮ ನಾಡಿನ ಸಾಂಸ್ಕೃತಿ ಸೊಗಡಿನ ಕಲೆಯಾಗಿದ್ದು, ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಿ ಎಂದರು.


ಕಲಾವಿದರಿಗೆ ನೀಡುತ್ತಿರುವ ಮಾಸಾಶನವನ್ನು 10 ಸಾವಿರ ರೂ.ಗೆ ಹೆಚ್ಚಿಸಬೇಕು. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಹಂತದಲ್ಲಿ ಮಕ್ಕಳಿಗೆ ಸಂಗೀತ ನಾಟಕ ವಿಷಯಗಳಲ್ಲಿ ರಂಗಕಲೆಯ ಬಗ್ಗೆ ಪಠ್ಯದಲ್ಲಿ ಸೇರಿಸಿ ತರಬೇತಿ ನೀಡುವ ಅವಶ್ಯಕತೆ ಇದೆ. ಇದಕ್ಕಾಗಿ ಸಂಗೀತ ವಿಷಯದಲ್ಲಿ ಬಿ ಮ್ಯೂಸಿಕ್, ಎಂ ಮ್ಯೂಸಿಕ್ ಪದವಿ ಪಡೆದುಕೊಂಡು ನಿರುದ್ಯೋಗಿಗಳಾಗಿರುವ ಶಿಕ್ಷಕರನ್ನು ನೇಮಿಸಿಕೊಂಡು ಸರ್ಕಾರ ಕೂಡಲೇ ಕ್ರಮವಹಿಸಿ ಕಲಾ ರಂಗ ಉಳಿಸಬೇಕೆಂದು ಒತ್ತಾಯಿಸಿದರು.


ಪೌರಾಣಿಕ ನಾಟಕಗಳಾದ ದಕ್ಷ ಯಜ್ಞ, ಸಂಪೂರ್ಣ ರಾಮಾಯಣ, ಕುರುಕ್ಷೇತ್ರ ಸೇರಿದಂತೆ ಹಲವು ರಂಗಗೀತೆಗಳನ್ನು 36ಕ್ಕೂ ಹೆಚ್ಚು ಹಿರಿಯ ರಂಗಭೂಮಿ ಕಲಾವಿದರು ಹಾಡಿ ರಂಜಿಸಿದರು. ರಂಗ ಗೀತೋತ್ಸವದಲ್ಲಿ ಚಂದ್ರಪ್ರಕಾಶ್ ಎಡಗನಹಳ್ಳಿ ಪ್ರಥಮ, ಗಾಡಿ ಮಹದೇವು ಚಿಕ್ಕ ಕಲ್ಕುಣಿ ದ್ವಿತೀಯ, ಶ್ರೀನಿವಾಸ್ ಬನ್ನಳ್ಳಿ ತೃತೀಯ, ನಟೇಶ್ ಹೆಮ್ಮಿಗೆ, ಮಹೇಶ್ ಮಂಡ್ಯ ಸಮಾಧಾನಕರ ಬಹುಮಾನ ಪಡೆದರು.


ಜೈ ಭೀಮ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಎಂ.ಎನ್.ಜಯರಾಜು, ರಾಜ್ಯ ಲೆಕ್ಕಪತ್ರ ಇಲಾಖೆ ನಿವೃತ್ತ ಅಧಿಕಾರಿ ಪಿ.ಎನ್. ನಾಗರಾಜು, ಕಸಾಪ ತಾಲೂಕು ಅಧ್ಯಕ್ಷ ಚೇತನ್ ಕುಮಾರ್ ನೆಟ್ಕಲ್, ಮೈಸೂರಿನ ರಂಗಕರ್ಮಿ ಕೆ.ಆರ್ .ಗೋಪಾಲಕೃಷ್ಣ, ಬ್ಯಾಂಕ್ ನಿವೃತ್ತ ಅಧಿಕಾರಿ, ಚಂದ್ರಹಾಸ, ಸಾಹಿತಿ ಬಸಪ್ಪ ನೆಲಮಕನಹಳ್ಳಿ, ಮುಖಂಡರಾದ ಬಿ.ಎಸ್.ಮಹದೇವಯ್ಯ, ರಾಘವೇಂದ್ರ, ವಿಶ್ವ ಕೊಡಗಳ್ಳಿ, ಸುಬ್ರಹ್ಮಣ್ಯ ರಾಜೆ ಅರಸ್ ಇದ್ದರು.