ಜಿಲ್ಲೆ

ಕಣ್ಮನ ಸೆಳೆಯುತ್ತಿದೆ ಗಗನಚುಕ್ಕಿ ಜಲಪಾತ

ಮಳವಳ್ಳಿ: ಕಳೆದ ಹಲವು ದಿನಗಳಿಂದ ಬಿದ್ದ ವರ್ಷಧಾರೆ ಅಬ್ಬರದಿಂದ ನಾಡಿನ ಜೀವನಾಡಿ ಕಾವೇರಿ ಮೈದುಂಬಿ ಹರಿಯುತ್ತಿದ್ದು, ಶಿವನ ಸಮುದ್ರ ಬಳಿಯ ಗಗನಚುಕ್ಕಿ ಜಲಪಾತ ಧುಮ್ಮಿಕ್ಕುತ್ತಾ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.


ಕೆಲವು ದಿನಗಳಿಂದ ಕೆರಳ ಮತ್ತು ಕೊಡಗಿನಲ್ಲಿ ಬಿಡುವಿಲ್ಲದೇ ಸುರಿದ ಮಳೆಯಿಂದ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಿಗೆ ನೀರು ಹರಿದು ಬಂದಿದ್ದು, ಕಬಿನಿ ಅಣೆಕಟ್ಟೆಯಿಂದ ನೀರು ಬಿಟ್ಟಿರುವುದರಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ತಾಲೂಕಿನ ಗಡಿ ಭಾಗದಲ್ಲಿರುವ ಗಗನಚುಕ್ಕಿ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದೆ.


ತಿಂಗಳ ವಾರಾಂತ್ಯದ ಶನಿವಾರ, ಭಾನುವಾರ ಸೇರಿಕೊಂಡು ಎರಡು ದಿನ ಸರ್ಕಾರಿ ರಜೆ ಇರುವುದರಿಂದ ಇಲ್ಲಿನ ಪ್ರಕೃತಿಯ ರಮಣೀಯ ಸೊಬಗನ್ನು ಕಣ್ತುಂಬಿಕೊಳ್ಳಲು ನಗರ ಪ್ರದೇಶಗಳಿಂದ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಅದರಲ್ಲೂ ವೀಕೆಂಡ್ ರಜೆಯನ್ನು ಸಂಭ್ರಮಿಸಲು ಬೆಂಗಳೂರು, ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಕುಟುಂಬ ಸಮೇತರಾಗಿ ತಂಡೋಪತಂಡವಾಗಿ ಪ್ರವಾಸಿಗರು ದಾಂಗುಡಿ ಇಡುತ್ತಿದ್ದಾರೆ.


ಭರ್ಜರಿ ವ್ಯಾಪಾರ: ಪ್ರತಿವರ್ಷ ಮುಂಗಾರು ಸಂದರ್ಭದಲ್ಲಿ ಜಲಪಾತದ ವೈಭವವನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುವುದರಿಂದ ಇಲ್ಲಿನ ಸಣ್ಣಪುಟ್ಟ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಗುತ್ತಿದೆ. ಚುರುಮುರಿ, ಸೌತೆಕಾಯಿ, ಮಕ್ಕಳ ಆಟಿಕೆ ಮುಸುಕಿನ ಜೋಳ, ಕಡಲೆಕಾಯಿ ಮಾರಾಟ ಭರ್ಜರಿಯಾಗಿಯೇ ನಡೆಯುತ್ತಿದೆ.