ಕಣ್ಮನ ಸೆಳೆಯುವ ಜಂಬೂಸವಾರಿಯಲ್ಲಿ ಹೆಜ್ಜೆ ಹಾಕುವ ಗಜಪಡೆ ಸೋಮವಾರ ಕಾಡಿನಿಂದ ನಾಡಿಗೆ ಬಂದವು. ಇದರೊಂದಿಗೆ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಚಟುವಟಿಕೆಗಳು ಅಧಿಕೃತವಾಗಿ ಗರಿಗೆದರಿದಂತಾಗಿದೆ.
ಹುಣಸೂರು ತಾಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಳ್ಳಿ ಗೇಟ್ ಬಳಿ ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ‘ಗಜಪಯಣ’ಕ್ಕೆ ಚಾಲನೆ ನೀಡಲಾಯಿತು. ಎಂದೆಂದಿಗಿಂತಲೂ ಈ ಸಲ ಹೆಚ್ಚಿನ ಪ್ರಮಾಣದಲ್ಲಿ ಜಮಾವಣೆಗೊಂಡಿದ್ದ ಜನಸ್ತೋಮ ಈ ಕ್ಷಣವನ್ನು ಕಣ್ತುಂಬಿಕೊಂಡು ಸಂಭ್ರಮಿಸಿತು.
ಎಲ್ಲ ಆನೆಗಳನ್ನು ಮಾವುತ, ಕಾವಾಡಿಗಳು ಸ್ನಾನ ಮಾಡಿಸಿ ಕರೆತಂದರು. ಅವುಗಳಿಗೆ ಗಾದಿ ಕಟ್ಟಿ, ಜೂಲಾ(ಗೌನ್) ಹೊದಿಸಲಾಯಿತು. ನಂತರ 7 ಗಂಡಾನೆಗಳ ದಂತಕ್ಕೆ ಸಿಂಗೋಟಿ ತೊಡಿಸಿ, ಹಣೆಪಟ್ಟಿ ಹಾಕಿದ ನಂತರ ಆನೆಗಳ ಹೆಸರಿನ ಪಟ್ಟಿ ಕಟ್ಟಿ ಅಲಕೃಂತಗೊಳಿಸಿ ಸಾಲಾಗಿ ನಿಲ್ಲಿಸಲಾಯಿತು.
ಆನೆಗಳಿಗೆ ಜಯ, ವಿಜಯ ಪೂಜೆ, ದ್ವಾರ ಮಹಾಲಕ್ಷ್ಮೀ ಪೂಜೆ, ಪಾದ ತೊಳೆದು ಅರಿಶಿಣಿ, ಕುಂಕುಮ, ವಿಭೂತಿ, ಗಂಧ ಹಚ್ಚಿ, ಅಕ್ಷತೆ ಹಾಕಿ ಓಂಕಾರ ಬರೆದು ಪೂಜೆ ನಡೆಸಲಾಯಿತು.
ವನದೇವತೆ ಪ್ರಾರ್ಥನೆ, ಚಾಮುಂಡೇಶ್ವರಿ ಪೂಜೆ ಮಾಡಿದ ಬಳಿಕ ಗಣಪತಿ ಅರ್ಚನೆ, ಗಣಪತಿ ಅಥರ್ವಶಿಷ್ಯ ಮಂತ್ರ ಪಠಿಸಿ ಸಾಕ್ಷಾತ್ ಗಣಪತಿ ಪೂಜೆ ಮಾಡಲಾಯಿತು. ಬಳಿಕ ಗಣೇಶನಿಗೆ ಇಷ್ಟವಾದ ವಿವಿಧ ಬಗೆಯ ತಿಂಡಿ, ವಿವಿಧ ಬಗೆಯ ಹಣ್ಣು, ಕಬ್ಬು, ಬೆಲ್ಲ ನೀಡಲಾಯಿತು.
ಮಧ್ಯಾಹ್ನ 12.34ಕ್ಕೆ ಆಗಮಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಇನ್ನಿತರರು ಮಹಾ ಸಂಕಲ್ಪ ಮಾಡಿ, ಪುಷ್ಪಾರ್ಚನೆಗೈಯ್ಯುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಿದರು.
9 ಆನೆಗಳಿಗೂ ಕುಂಬಳಕಾಯಿಯಿಂದ ಇಳಿ ತೆಗೆದು ಒಡೆಯಲಾಯಿತು. ಈಡುಗಾಯಿ ಒಡೆದು ಆನೆಗಳಿಂದ ನಿಂಬೆಹಣ್ಣು ತುಳಿಸಿದ ನಂತರ ವರ್ಣ ರಂಜಿತ ಮೆರವಣಿಗೆ ಶುರುವಾಯಿತು. ಇದಕ್ಕೆ ಪ್ರತಿಯಾಗಿ ಆನೆಗಳು ಸೊಂಡಿಲನ್ನು ಎತ್ತಿ ಘೀಳಿಡುವ ಮೂಲಕ ಎಲ್ಲರಿಗೂ ನಮಿಸಿದವು.
ಬಳಿಕ ಶುರುವಾದ ಗಜಪಯಣದಲ್ಲಿ ಆನೆಗಳು ಹೆಜ್ಜೆ ಹಾಕಿದವು. ವಿವಿಧ ಜಾನಪದ ಕಲಾತಂಡಗಳು ಮೆರುಗು ನೀಡಿದವು. ವೀರನಹೊಸಳ್ಳಿ ಗೇಟ್‌ನಿಂದ 1.5 ಕಿ.ಮೀ. ದೂರದ ನಾಗಾಪುರ ಹಾಡಿ ಸಮೀಪದ ಮೈದಾನದಲ್ಲಿ ಆಯೋಜಿಸಿದ್ದ ಸಭಾವೇದಿಕೆ ಕಾರ್ಯಕ್ರಮದವರೆಗೂ ಮೆರವಣಿಗೆ ಮೂಲಕ ಗಜಪಡೆಯನ್ನು ಕರೆತರಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಗೈರಾಗುವ ಮೂಲಕ ಸಂಪ್ರದಾಯವನ್ನು ಮುರಿದರು. ಶಾಸಕರಾದ ತನ್ವೀರ್ ಸೇಠ್, ಜಿ.ಡಿ.ಹರೀಶ್‌ಗೌಡ, ಡಿ.ರವಿಶಂಕರ್, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಜಿಪಂ ಸಿಇಒ ಯುಕೇಶ್‌ಕುಮಾರ್, ಎಸ್‌ಪಿ ವಿಷ್ಣುವರ್ಧನ್ ಇತರರು ಪಾಲ್ಗೊಂಡಿದ್ದರು.
ಗಜಪಡೆ ನಾಯಕ ಅಭಿಮನ್ಯು(59)ನೊಂದಿಗೆ ಮತ್ತಿಗೋಡು ಶಿಬಿರದ ಭೀಮ (25), ದುಬಾರೆ ಶಿಬಿರದ ಕಂಜನ್ (24), ಧನಂಜಯ (44), ಪ್ರಶಾಂತ್ (53), ಬಳ್ಳೆ ಶಿಬಿರದ ಮಹೇಂದ್ರ (42), ದೊಡ್ಡಹರವೆ ಶಿಬಿರದ ಏಕಲವ್ಯ (40) ಸೇರಿದಂತೆ 7 ಗಂಡಾನೆ ಹಾಗೂ ದುಬಾರೆ ಶಿಬಿರದ ಕಾವೇರಿ (45), ಬಳ್ಳೆಯ(ದೊಡ್ಡಹರವೆ)ಲಕ್ಷ್ಮೀ(53) ಹೆಣ್ಣಾನೆಗಳು ಮೊದಲ ತಂಡದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದವು. ಇವುಗಳನ್ನು ಲಾರಿಯ ಮೂಲಕ ನಗರದ ಅರಣ್ಯಭವನಕ್ಕೆ ಸಂಜೆ 5.55ಕ್ಕೆ ಕರೆತರಲಾಯಿತು.
ಆ.10ರಂದು ಅರಮನೆಗೆ ಗಜಪಡೆ ಪ್ರವೇಶಿಸಲಿದೆ. ಈ ಸಲ ದಸರಾಕ್ಕೆ 14 ಆನೆಗಳನ್ನು ಆಯ್ಕೆ ಮಾಡಲಾಗಿದೆ. 2ನೇ ತಂಡದ ಆನೆಗಳು ಶೀಘ್ರದಲ್ಲೇ ಮೊದಲ ತಂಡವನ್ನು ಸೇರಿಕೊಳ್ಳಲಿವೆ. ಜಂಬೂಸವಾರಿಗೆ ಸಜ್ಜುಗೊಳಿಸಲು ಆನೆಗಳ ತಾಲೀಮು ನಿತ್ಯ ನಡೆಯಲಿದ್ದು, ವಿಶೇಷ ಆರೈಕೆ ಸಹ ಮಾಡಲಾಗುತ್ತದೆ.
ಭಾರೀ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಜನಸ್ತೋಮದ ಸಮ್ಮುಖದಲ್ಲಿ ಗಜಪಯಣ ನಡೆದಿದ್ದು ಈ ಸಲದ ವಿಶೇಷ. ಈ ಹಿಂದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿರಲಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು, ಹಾಡಿಯ ಕೆಲ ಜನರು, ಮಕ್ಕಳು ಮಾತ್ರ ಭಾಗಿಯಾಗುತ್ತಿದ್ದರು.
ಅರ್ಜುನ ಪ್ರಶಸ್ತಿ ಪ್ರದಾನ
ಹಾಸನ, ಸಕಲೇಶಪುರ, ಕೊಡಗು ಮೊದಲಾದ ಕಡೆಗಳಲ್ಲಿ ಆನೆ ಮತ್ತು ವನ್ಯಜೀವಿ ಸೆರೆ ಕಾರ್ಯಾಚರಣೆಗಳಲ್ಲಿ ಯಶಸ್ವಿಯಾಗಿ ಭಾಗಿಯಾಗಿರುವ ‘ಭೀಮ’ ಆನೆಯ ಮಾವುತ ಗುಂಡ ಹಾಗೂ ಕವಾಡಿ ನಂಜುಂಡಸ್ವಾಮಿ ಅವರಿಗೆ 2025ರ ಸಾಲಿನ ಅರ್ಜುನ ಆನೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಇದು 10 ಸಾವಿರ ರೂ. ಮತ್ತು ಪಾರಿತೋಷಕವನ್ನು ಒಳಗೊಂಡಿದೆ. ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ಹುತಾತ್ಮನಾದ ದಸರಾ ಆನೆ ಅರ್ಜುನನ ಹೆಸರಲ್ಲಿ ಸ್ಥಾಪಿಸಿರುವ ವಾರ್ಷಿಕ ಪ್ರಶಸ್ತಿ ಇದಾಗಿದೆ.