ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಜಯ ದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಭಾನುವಾರ ಸಂಜೆ ನಗರದಲ್ಲಿ ಹಮ್ಮಿಕೊಂಡಿದ್ದ ಪಥ ಸಂಚಲನ ಜನರ ಕಣ್ಮನ ಸೆಳೆಯಿತು.
ಗಣ ವೇಷಧಾರಿಗಳು ಶಿಸ್ತಿನ ಸಿಪಾಯಿಗಳಂತೆ ಘೋಷ ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರೆ, ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರು ಕುತೂಹಲದಿಂದ ಸಂಚಲನ ವೀಕ್ಷಿಸಿದರು. ಸಂಚಲನ ಅಂಗವಾಗಿ ನಗರದ ಪ್ರಮುಖ ಬೀದಿಗಳನ್ನು ರಂಗೋಲಿ, ಪುಷ್ಪಗಳಿಂದ ಅಲಂಕರಿಸಲಾಗಿತ್ತು.
ಸಂಚಲನದಲ್ಲಿದ್ದ ಭಗವಾ ಧ್ವಜ ಹಾಗೂ ಸಂಘದ ಸಂಸ್ಥಾಪಕರಾದ ಡಾಕ್ಟರಜೀ, ಗುರೂಜಿ ಭಾವಚಿತ್ರಕ್ಕೆ ಜನರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಕರ್ನಾಟಕ ಹೈಸ್ಕೂಲ್‌ನಿಂದ ಪ್ರಾರಂಭವಾದ ಪಥ ಸಂಚಲನ ರೀಗಲ್ ವೃತ್ತ, ಕಾಮತ್ ಹೋಟೆಲ್ ವೃತ್ತ, ಸುಭಾಷ ರಸ್ತೆ, ಗಾಂಧಿ ಚೌಕ್, ಹೆಬ್ಬಳ್ಳಿ ಅಗಸಿ, ಮಂಗಳವಾರಪೇಟ, ಭೂಸಪ್ಪ ಚೌಕ್, ಜಕಣಿ ಭಾವಿ ರಸ್ತೆ, ವಿವೇಕಾನಂದ ವೃತ್ತ, ಅಕ್ಕಿಪೇಟೆ ಮಾರ್ಗವಾಗಿ ಕರ್ನಾಟಕ ಹೈಸ್ಕೂಲ್‌ನಲ್ಲಿ ಸಮಾರೋಪಗೊಂಡಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಾಂತ ಸಾಮರಸ್ಯ ಗತಿವಿಧಿ ಸಂಯೋಜಕ ಶ್ರೀಧರ ಜೋಶಿ, ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಶಿವಮೂರ್ತಿ ಕೋಟೂರ ಮಾತನಾಡಿದರು. ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಧರ ನಾಡಗೀರ, ಪ್ರಾಂತ ಪ್ರಚಾರಕ ನರೇಂದ್ರ, ಪ್ರಾಂತ ವ್ಯವಸ್ಥಾ ಪ್ರಮುಖ ಶ್ರೀನಿವಾಸ ನಾಡಗೀರ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಸ್ವಯಂ ಸೇವಕರು, ಇತರರು ಇದ್ದರು.