ಜಿಲ್ಲೆ

ಕಣ್ಣೆದುರೇ ಮನೆ, ಜಾನುವಾರುಗಳು ಭಸ್ಮ

ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಶಿರಾ ನಗರ ಠಾಣೆ ಪೊಲೀಸರು ಭೇಟಿ, ಪರಿಶೀಲನೆ

ಬುಕ್ಕಾಪಟ್ಟಣ: ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಪುರ ಗ್ರಾಮದ ಗೌಡನಕಟ್ಟೆಯಲ್ಲಿ ಯುಗಾದಿ ಹಬ್ಬದ ಬೆಳಗಿನ ಜಾವ ತಗುಲಿದ ಬೆಂಕಿಗೆ ಮನೆ ಸಂಪೂರ್ಣ ಭಸ್ಮವಾಗಿದ್ದು, ಕಣ್ಣೆದುರೇ ಜಾನುವಾರಗಳು ಸಜೀವ ದಹನವಾಗಿವೆ. ಗ್ರಾಮದ ಬೋವಿ ಜನಾಂಗದ ರತ್ನಮ್ಮ ಎಂಬುವವರು ತಮ್ಮ ಜಮೀನಿನಲ್ಲಿ ಮನೆ ಕಟ್ಟಿಕೊಂಡು ಇಬ್ಬರು ಮಕ್ಕಳು ಮತ್ತು ಸೊಸೆ ಹಾಗೂ ಜಾನುವಾರುಗಳೊಂದಿಗೆ ವಾಸವಿದ್ದರು.

ಯುಗಾದಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿ ಬೇಸಿಗೆಯ ಕಾರಣಕ್ಕೆ ಗುಡಿಸಲಿನಿಂದ ಸ್ವಲ್ಪ ದೂರದ ಬಯಲಿನಲ್ಲಿ ಮಲಗಿದ್ದರು. ಭಾನುವಾರ ಮಧ್ಯರಾತ್ರಿ ಜಾವ 2:30 ಸುಮಾರಿಗೆ ಬೆಂಕಿ ಮನೆಯನ್ನು ಆವರಿಸಿಕೊಂಡಿದೆ. ಈ ವೇಳೆ ಬೆಂಕಿ ನಂದಿಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ, ಮನೆಯ ಸುತ್ತಮುತ್ತ ಯಾವುದೇ ಮನೆ ಇಲ್ಲದ ಕಾರಣ ಬೆಂಕಿಯ ಕೆನ್ನಾಲಿಗೆಗೆ ಎರಡು ಹಸು, ಒಂದು ಕರು, ನಾಲ್ಕು ಮೇಕೆ, ಎರಡು ಕುರಿಗಳು, ನಾಯಿ ಸಜೀವ ದಹನವಾಗಿವೆ. ಮನೆಯಲ್ಲಿದ್ದ ದಿನಸಿ ಸಾಮಗ್ರಿ, ಒಂದು ಲಕ್ಕೂ ಹೆಚ್ಚು ಹಣ, ವಸ್ತುಗಳು, ಕೃಷಿ ಸಮಗ್ರಿಗಳು ಜಾನುವಾರಿಗೆ ಸಂಗ್ರಹಿಸಿದ್ದ ಮೇವು ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಶಿರಾ ನಗರ ಪೊಲೀಸ್​ ಇಲಾಖೆ ಸಿಬ್ಬಂದಿ, ಕುರುಬರಹಳ್ಳಿ ಪಿಡಿಒ ಹಾಗೂ ಅಧ್ಯ ತಿಮ್ಮಕ್ಕ ಕೆಂಗಣ್ಣ, ಸಿಬ್ಬಂದಿ, ಪಶು ಸಂಗೋಪನ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿರಾ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಕಿಗೆ ತೆಂಗಿನ ಮರಗಳು ನಾಶ

ಬುಕ್ಕಾಪಟ್ಟಣ: ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿ ನೇರಳಗುಡ ಗ್ರಾಮದಲ್ಲಿ ಜಮೀನಿಗೆ ಬೆಂಕಿ ಬಿದ್ದ ಪರಿಣಾಮ ತೆಂಗಿನ ಮರಗಳು ಹಾಗೂ ಪೈಪ್​ಗಳು ಹಾಗೂ ಕೃಷಿ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ. ಸೋಮವಾರ ಮಧ್ಯಾಹ್ನ ಬಿದ್ದ ಬೆಂಕಿಗೆ ಕರಿಯಮ್ಮ ಕೋ ಜುಂಜಣ್ಣ ಅವರಿಗೆ ಸೇರಿದ 20 ತೆಂಗಿನ ಮರಗಳು, ಕೃಷಿ ಪೈಪ್​ ಸುಟ್ಟು ಕರಕಲಾಗಿದ್ದು, ರೇಣುಕಮ್ಮ ಶಿವಣ್ಣನವರಿಗೆ ಸೇರಿದ ಜಮೀನಿನಲ್ಲಿ 60 ಲೆಂತ್​ ಪಿವಿಸಿ ಪೈಪ್​, ಐದು ರೋಲ್​ ಡ್ರಿಪ್​ ಪೈಪ್​, 300 ಮೀಟರ್​ ಮೈನ್ಸ್​ ವಯರ್​ ಸುಟ್ಟು ಹೋಗಿವೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಿಪಟೂರಲ್ಲಿ ಸಿಲಿಂಡರ್​ ಸ್ಫೋಟದಿಂದ 4 ಮನೆಗೆ ಹಾನಿ

ತಿಪಟೂರು: ಗ್ಯಾಸ್​ ಸಿಲಿಂಡರ್​ ಸ್ಫೋಟಗೊಂಡು ನಾಲ್ಕು ಮನೆಗಳು ಭಸ್ಮವಾಗಿದ್ದು, ಯುಗಾದಿ ಹಬ್ಬದ ಸಂಭ್ರಮಾಚರಣೆಗೆ ಅಡ್ಡಿಯಾಗಿದೆ. ತಾಲೂಕಿನ ಕಸಬಾ ಹೋಬಳಿ ಕಲ್ಲಯ್ಯನಪಾಳ್ಯದ ಗಂಗಾಧರ್​ ಮನೆಯಲ್ಲಿ ಯುಗಾದಿ ಹಬ್ಬದ ಅಡುಗೆ ಮಾಡುವಾಗ ಗ್ಯಾಸ್​ ಸೋರಿಕೆಯಾಗಿ ವಾಸನೆ ಬಂದ ಹಿನ್ನೆಲೆಯಲ್ಲಿ ಮನೆಯಲ್ಲಿದ್ದವರೆಲ್ಲಾ ಹೊರಕ್ಕೆ ಓಡಿ ಬಂದಿದ್ದಾರೆ. ಅಷ್ಟೆರಲ್ಲಾಗಲೇ ಬೆಂಕಿ ಆವರಿಸಿದ್ದು, ಗಂಗಾಧರ್​ ಸೋದರಿಯ ಮನೆ ಮತ್ತು ಪಕ್ಕದ ರೂಪಾ ಹಾಗೂ ಗೌರಮ್ಮ ಅವರ ಮನೆಗೂ ವ್ಯಾಪಿಸಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ತಿಪಟೂರು ಅಗ್ನಿಶಾಮಕ ದಳದ ಸಣ್ಣ ವಾಹನದಲ್ಲಿದ್ದ 500 ಲೀಟರ್​ ನಿಮಿಷ ಮಾತ್ರದಲ್ಲಿ ಖಾಲಿಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಅಸಹಾಯಕರಾಗುತ್ತಿದ್ದಂತೆ ಗ್ರಾಮಸ್ಥರು ಮನೆಗಳಲ್ಲಿ ಶೇಖರಿಸಿಟ್ಟಿದ್ದ ನೀರು ಪೊರೈಸಿ ಬೆಂಕಿ ನೆಂದಿಸಲು ನೆರವಾಗಿದ್ದಾರೆ. ಕೊಬ್ಬರಿ ಸೇರಿ ಲಾಂತರ ಮೌಲ್ಯದ ವಸ್ತುಗಳು ನಾಶವಾಗಿದೆ.