ಚಿತ್ರದುರ್ಗ: ಕಣ್ಣುಗಳು ಆತ್ಮದ ಕಿಟಕಿಗಳಿದ್ದಂತೆ, ಅದರ ರಕ್ಷಣೆ ಅತ್ಯಂತ ಅಮೂಲ್ಯವಾದದ್ದು. ಅಲ್ಲದೆ, ತಪಾಸಣೆಯೊಂದಿಗೆ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಿ ಎಂದು ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್ ಸಲಹೆ ನೀಡಿದರು.
ಆರೋಗ್ಯ ಇಲಾಖೆ, ತಾಪಂ, ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ, ಟಿಎಚ್‌ಒ ಕಚೇರಿ, ಶಂಕರ್ ಕಣ್ಣಿನ ಆಸ್ಪತ್ರೆ, ಜೆ.ಎನ್.ಕೋಟೆ ಗ್ರಾಪಂನಿಂದ ಪಂಚಾಯಿತಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೃಹತ್ ಉಚಿತ ನೇತ್ರ ತಪಾಸಣೆ ಶಸ್ತ್ರಚಿಕಿತ್ಸೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಬಿರವೂ ಕೇವಲ ಒಂದು ದಿನಕ್ಕೆ ಸೀಮಿತವಲ್ಲ. ಪ್ರತಿ ತಿಂಗಳು ಆಯ್ದ ಗ್ರಾಮಗಳಲ್ಲಿ ನಡೆಸಲಾಗುವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ ಮಾತನಾಡಿ, ಪಂಚೇಂದ್ರಿಯಗಳಲ್ಲಿ ಪ್ರಧಾನವಾದ ಇಂದ್ರಿಯ ಕಣ್ಣು. ಆದ್ದರಿಂದ ದಾನ ಮಾಡುವವರು ಮುಂದೆ ಬನ್ನಿ. ಅಂಧತ್ವ ನಿವಾರಣೆಗೆ ಎಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿದರು.
1200 ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ: ಜಿಲ್ಲಾಸ್ಪತ್ರೆಯಲ್ಲಿ ಈ ವರ್ಷ 1,200 ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸಿ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಗಿದೆ ಎಂದು ಡಾ.ರವೀಂದ್ರ ಮಾಹಿತಿ ನೀಡಿದರು. ಶಿಬಿರದಲ್ಲಿ 219 ಜನರ ತಪಾಸಣೆ ನಡೆಸಲಾಯಿತು. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ 52 ಅರ್ಹ ಫಲಾನುಭವಿಗಳು ಆಯ್ಕೆಯಾದರು.
ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಜಿ.ಓ.ನಾಗರಾಜ್, ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ಉದ್ಯಮಿ ಬಾಬಣ್ಣ, ಗ್ರಾಪಂ ಅಧ್ಯಕ್ಷ ಮಲ್ಲೇಶಪ್ಪ, ಉಪಾಧ್ಯಕ್ಷೆ ನಾಗಮ್ಮ, ಪಿಡಿಒ ಮಂಜುಳಾ, ಶಂಕರ್ ಆಸ್ಪತ್ರೆಯ ಡಾ.ರವಿಕಿರಣ್, ಜಿಲ್ಲಾ ಆಯುಷ್ ಅಧಿಕಾರಿ ಚಂದ್ರಕಾಂತ ನಾಗಸಮುದ್ರ, ಟಿಎಚ್‌ಒ ಡಾ.ಬಿ.ವಿ.ಗಿರೀಶ್, ನೇತ್ರಾಧಿಕಾರಿ ರಾಮು, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಎನ್.ಎಸ್.ಮಂಜುನಾಥ, ಬಿ.ಜಾನಕಿ ಇತರರಿದ್ದರು.