ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಗ್ರಾಮಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಶಿವಶಂಕರ್ ಉದ್ಘಾಟಿಸಿದರು. 
ಜಿಲ್ಲೆ

ಕಣ್ಣಿನ ಸುರಕ್ಷತೆಗಾಗಿ ಹೆಚ್ಚಿನ ಕಾಳಜಿ ಅಗತ್ಯ

ಗುಂಡ್ಲುಪೇಟೆ: ಪ್ರತಿಯೊಬ್ಬ ಮನುಷ್ಯನಿಗೂ ಕಣ್ಣು ಬಹು ಮುಖ್ಯವಾದ ಅಂಗವಾಗಿದ್ದು, ಇತ್ತೀಚಿನ ದಿನಗಳಲ್ಲಿ ಜನರು ನಾನಾ ಕಾರಣಗಳಿಂದ ಕಣ್ಣಿನ ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ಕಬ್ಬಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಶಂಕರ್ ಹೇಳಿದರು.

ತಾಲೂಕಿನ ಕಬ್ಬಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಜನರ ನಿರ್ಲಕ್ಷ್ಯದಿಂದ ಅಥವಾ ಪೋಷಕಾಂಶಗಳ ಕೊರತೆಯಿಂದ ಚಿಕ್ಕ ವಯಸ್ಸಿನಲ್ಲಿಯೇ ಹಲವರು ಕಣ್ಣಿನ ಸಮಸ್ಯೆಯಲ್ಲಿ ಸಿಲುಕುತ್ತಾರೆ. ಯುವಜನತೆ ಹಾಗೂ ಮಕ್ಕಳು ಅತಿ ಹೆಚ್ಚಿನ ಮೊಬೈಲ್ ಬಳಕೆಯಿಂದ ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಕಣ್ಣಿನ ಸುರಕ್ಷತೆಗಾಗಿ ಕಾಳಜಿ ವಹಿಸಬೇಕು. ಇತ್ತೀಚಿನ ದಿನಗಳಲ್ಲಿ ಕಣ್ಣಿನ ಚಿಕಿತ್ಸೆ ದುಬಾರಿಯಾಗುತ್ತಿದ್ದು, ಸ್ವಯಂಸೇವಾ ಸಂಸ್ಥೆಗಳು ಶಿಬಿರಗಳನ್ನು ಆಯೋಜಿಸುವ ಮೂಲಕ ಉತ್ತಮ ಕಾರ್ಯ ಮಾಡುತ್ತಿವೆ. ಗ್ರಾಮ ಪಂಚಾಯಿತಿಯು ಉಚಿತ ಶಿಬಿರ ಆಯೋಜಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಅರವಿಂದ ಕಣ್ಣಾಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ವಿಜಯಕಾಂತ್ ಮಾತನಾಡಿ, ಸಕ್ಕರೆ ಕಾಯಿಲೆಯು ವ್ಯಕ್ತಿಯ ಕಣ್ಣಿನ ದೃಷ್ಟಿಯ ಮೇಲೆ ತುಂಬ ಪರಿಣಾಮ ಬೀರುತ್ತಿದ್ದು, ಡಯಾಬಿಟಿಕ್ ರೆಟಿನೋಪತಿಯಿಂದ ಕಣ್ಣಿನ ನರಗಳು ದುರ್ಬಲವಾಗುತ್ತವೆ. 40 ವರ್ಷ ಮೇಲ್ಪಟ್ಟ ಎಲ್ಲರೂ ಕನಿಷ್ಠ ವರ್ಷಕ್ಕೊಮ್ಮೆಯಾದರೂ ಕಣ್ಣಿನ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಎಂದರು.

ಇಂತಹ ಶಿಬಿರಗಳಲ್ಲಿ ತಪಾಸಣೆ ನಡೆಸಿ ಉಚಿತವಾಗಿ ಕ್ಯಾಟರಾಕ್ಟ್ ಶಸ್ತ್ರ ಶಸ್ತ್ರಚಿಕಿತ್ಸೆ ಮಾಡಿ ಐಒಎಲ್ ಲೆನ್ಸ್ ಅಳವಡಿಸಿ ದೃಷ್ಟಿ ಉಳಿಸುವಂತೆ ಮಾಡಲಾಗುತ್ತಿದೆ. ಸ್ವಯಂಸೇವಾ ಸಂಸ್ಥೆಗಳು ಹಾಗೂ ಸಮುದಾಯದ ಸಹಕಾರದಿಂದ ಆಸ್ಪತ್ರೆಯು ಪ್ರತಿ ತಿಂಗಳೂ ಅಲ್ಲಲ್ಲಿ ಕ್ಯಾಂಪ್‌ಗಳನ್ನು ಆಯೋಜಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿದ್ದು ಆಯಾ ಭಾಗದ ಸಾರ್ವಜನಿಕರು ತಮ್ಮ ಕಣ್ಣುಗಳ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಪ್ರತೀ ತಿಂಗಳ ಮೊದಲ ಶನಿವಾರ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗುತ್ತಿದೆ. ಶಿಬಿರದಲ್ಲಿ ರೋಗಿಗಳಿಗೆ ಉಚಿತ ತಪಾಸಣೆ ನಡೆಸುವುದರ ಜತೆಗೆ ಅಗತ್ಯವಿರುವವರಿಗೆ ಕೊಯಮತ್ತೂರಿಗೆ ಕರೆದೊಯ್ದು ಉಚಿತವಾಗಿ ಶಸ್ತ್ರ ಚಿಕಿತ್ಸೆಗೊಳಪಡಿಸಲಾಗುವುದು. ಇದರ ಪ್ರಯೋಜನವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಎಸ್.ಶಿರಿಯಪ್ಪ, ಗೋಪಾಲಸ್ವಾಮಿ, ಪುರುಷೋತ್ತಮ್, ಬಸವೇಗೌಡ, ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ಮಹದೇವಸ್ವಾಮಿ, ಜಿಲ್ಲಾ ಸಂಚಾಲಕ ರಾ.ಬಾಬು, ಕಬ್ಬಳ್ಳಿ ಸಂಪಿಗೆಪುರ, ಕಲ್ಲಳ್ಳಿ ಗ್ರಾಮಸ್ಥರು ಇದ್ದರು.

ಹೊರರೋಗಿಗಳ ತಪಾಸಣೆ: ಕಬ್ಬಹಳ್ಳಿ ಹಾಗೂ ಗುಂಡ್ಲುಪೇಟೆಯಲ್ಲಿ ನಡೆದ ಎರಡೂ ಶಿಬಿರಗಳಲ್ಲಿ ಡಾ.ರೋಹಿತ್, ಡಾ.ಕೃತಿನ್ ಷಾ, ಡಾ.ಶಿವಂಗೋಯಲ್ ಅವರ ತಂಡ 103 ಹೊರರೋಗಿಗಳನ್ನು ತಪಾಸಣೆಗೊಳಪಡಿಸಿ ಶಸ್ತ್ರಚಿಕಿತ್ಸೆ ಅಗತ್ಯವಿದ್ದ 23 ಜನರನ್ನು ಕೊಯಮತ್ತೂರಿಗೆ ಕರೆದೊಯ್ಯಲಾಯಿತು.

ಕೊಯಮತ್ತೂರಿನ ಅರವಿಂದ ಕಣ್ಣಾಸ್ಪತ್ರೆ ಹಾಗೂ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘವು ಕಬ್ಬಹಳ್ಳಿ ಗ್ರಾಮಪಂಚಾಯಿತಿ ಸಹಯೋಗದಲ್ಲಿ ಪಂಚಾಯಿತಿ ವ್ಯಾಪ್ತಿಯ ಕಬ್ಬಹಳ್ಳಿ, ಸಂಪಿಗೆಪುರ ಹಾಗೂ ಕಲ್ಲಹಳ್ಳಿ ಗ್ರಾಮಗಳ ಜನರಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಿರುವುದು ಈ ಭಾಗದ ಜನರಿಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಶಿಬಿರಗಳನ್ನು ಆಯೋಜಿಸಿ ಇನ್ನೂ ಹೆಚ್ಚಿನ ಜನರ ಕಣ್ಣಿನ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು.

  • ಎ.ಎಂ.ಮಹೇಶ್, ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಬ್ಬಹಳ್ಳಿ,