ಜಿಲ್ಲೆ

ಕಣ್ಣಿನ ಶಸ್ತ್ರ ಚಿಕಿತ್ಸೆ ಪಡೆದು ವಾಪಸಾದವರಿಗೆ ಸ್ವಾಗತ

ಬನ್ನೂರು: ಪಟ್ಟಣದ ರೋಟರಿ ಸಂಸ್ಥೆ, ಕಾನ್‌ಸಿಂಗ್‌ಜೀ ರಾಜ್‌ಪುರೋಹಿತ್, ಶ್ರೀಗೌರಿದೇವಿ, ಲಯನ್ಸ್ ಕ್ಲಬ್ ಆಫ್ ಈರೋಡ್ ಕಾವೇರಿ ಟ್ರಸ್ಟ್, ಕೊಯಮತ್ತೂರು ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದ ಶಿಬಿರಾರ್ಥಿಗಳು ಯಶಸ್ವಿಯಾಗಿ ಚಿಕಿತ್ಸೆ ಪಡೆದು ಮಂಗಳವಾರ ತವರಿಗೆ ವಾಪಸಾದರು.

ಶಿಬಿರಾರ್ಥಿ ಮಾದೇಗೌಡ ಮಾತನಾಡಿ, ಕಣ್ಣು ಕಾಣದೆ ಹಲವಾರು ವರ್ಷಗಳಿಂದ ವಿವಿಧ ಸಮಸ್ಯೆಗಳಿಂದ ಕತ್ತಲೆಯಲ್ಲಿಯೇ ಜೀವನ ಸಾಗಿಸುತ್ತಿದ್ದೆವು. ಡಾ.ಮಹೇಂದ್ರಸಿಂಗ್ ಕಾಳಪ್ಪ ಏರ್ಪಡಿಸಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ ನುರಿತ ವೈದ್ಯರಿಗೆ ತೋರಿಸಿ, ಕೊಯಮತ್ತೂರಿಗೆ ಉಚಿತವಾಗಿ ಕಳುಹಿಸಿ, ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ ಎಂದು ತಿಳಿಸಿದರು. ಇಂತಹ ಶಿಬಿರದಿಂದ ನಮ್ಮಂತವರಿಗೆ ತುಂಬಾ ಅನುಕೂಲವಾಗಿದ್ದು, ಕಣ್ಣು ಕಾಣದವರು ಇದರ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ರೋಟರಿ ಮಾಜಿ ಅಧ್ಯಕ್ಷ ಡಾ.ಮಹೇಂದ್ರಸಿಂಗ್‌ಕಾಳಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕಣ್ಣಿನ ಸಮಸ್ಯೆ ಇರುವವರು ನಗರ ಪ್ರದೇಶದಲ್ಲಿ ಚಿಕಿತ್ಸೆ ಪಡೆಯಲಾಗದ್ದನ್ನು ಮನಗಂಡು ಕಣ್ಣಿನ ಉಚಿತ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಇಂದು ಸಾವಿರಾರು ರೂ.ಗಳನ್ನು ವ್ಯಯಿಸಬೇಕಿದ್ದು, ಇಲ್ಲಿ ಯಾವುದೇ ರೀತಿಯ ಹಣದ ವ್ಯಯವಾಗದೇ ಕಡಿಮೆ ಅವಧಿಯಲ್ಲಿ ಉಚಿತ ಚಿಕಿತ್ಸೆ ನೀಡಿ ದೃಷ್ಟಿ ನೀಡಲಾಗುತ್ತಿದೆ ಎಂದು ಹೇಳಿದರು.

ಚಿಕಿತ್ಸೆ ಪಡೆದು ವಾಪಸ್ಸಾದ ಶಿಬಿರಾರ್ಥಿಗಳಿಗೆ ಹಣ್ಣು-ಹಂಪಲು ನೀಡಿ ಸ್ವಾಗತಿಸಲಾಯಿತು. ಪ್ರಮುಖರಾದ ರಾಜೇಶ್‌ಸಿಂಗ್, ಗೌರಿದೇವಿ, ಯಾಸೀನ್, ವನ್ಯಾ, ವಿರಾಟ್, ಸಂತೋಷ್‌ಕುಮಾರಿ, ಮೂರ್ತಿ, ಪ್ರಭು ಮತ್ತಿತರರು ಹಾಜರಿದ್ದರು.