ಹುಣಸೂರು: ಬುಡಕಟ್ಟು ಕೃಷಿಕರ ಸಂಘ, ಡೀಡ್ ಸಂಸ್ಥೆ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಜ.21ರಿಂದ 24ರವರೆಗೆ ಹುಣಸೂರು ಮತ್ತು ಎಚ್.ಡಿ.ಕೋಟೆ ತಾಲೂಕಿನ 10ಕ್ಕೂ ಹೆಚ್ಚು ಗಿರಿಜನ ಹಾಡಿಗಳಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ 350ಕ್ಕೂ ಹೆಚ್ಚು ಜನರು ತಪಾಸಣೆಗೊಳಗಾದರು.
ಶಿಬಿರದ ಸಂಯೋಜಕ ಕುಮಾರ್ ಮಾತನಾಡಿ, ತಾಲೂಕಿನ ಭರತವಾಡಿ ಹಾಡಿ, ವಿಜಯಗಿರಿ ಹಾಡಿಯ ಕಲ್ಲೂರಪ್ಪನ ಬೆಟ್ಟ ಮತ್ತು ತುಪ್ಪದಕೊಳ, ಕಪ್ಪನಕಟ್ಟೆ ಹಾಡಿ, ದೊಡ್ಡಹೆಜ್ಜೂರು ಹಾಗೂ ಎಚ್.ಡಿ.ಕೋಟೆ ತಾಲೂಕಿನ ಭೀಮನಹಳ್ಳಿ ಹಾಡಿ, ಕುಂಠೇರಿ, ಅಣ್ಣೂರು, ಪ್ರಭಾನಗರ, ಬಸವನಕಟ್ಟೆ ಹಾಡಿಗಳಲ್ಲಿ ಜ.21ರಿಂದ 24ವರೆಗೆ ಕಣ್ಣಿನ ಉಚಿತ ತಪಾಸಣೆ ಶಿಬಿರ ನಡೆಸಲಾಗಿದೆ.
ತಪಾಸಣೆಗೊಳಗಾದವರ ಪೈಕಿ 154 ಮಂದಿಗೆ ಕನ್ನಡಕದ ಅವಶ್ಯಕತೆ ಇದ್ದು, ಮುಂದಿನ ತಿಂಗಳು ಆಯೋಜಿಸುವ ಶಿಬಿರದಲ್ಲಿ ಉಚಿತವಾಗಿ ಕನ್ನಡಕ ವಿತರಿಸಲಾಗುವುದು. 40 ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಅಗತ್ಯವಿದ್ದು, ಬೆಂಗಳೂರಿಗೆ ಕರೆದುಕೊಂಡು ಹೋಗಲಾಗುವುದು. ಡಾ.ಜಗದೀಶ್, ಡಾ.ಮೊಹಮದ್, ಡಾ.ಸಜ್ಜನ್ ನೇತೃತ್ವದಲ್ಲಿ ತಪಾಸಣೆ ನಡಸಲಾಗಿದೆ ಎಂದರು.
ಶಿಬಿರದಲ್ಲಿ ಡೀಡ್ ಸಂಸ್ಥೆಯ ನಿರ್ದೇಶಕ ಡಾ.ಎಸ್.ಶ್ರೀಕಾಂತ್, ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕೊಳವಿಗೆ ಜಯಪ್ಪ, ಆದಿವಾಸಿ ಮುಖಂಡರಾದ ಬಿ.ಎಸ್.ವಿಠಲ್, ಲಕ್ಷ್ಮೀ, ಶಿವಣ್ಣ, ರಾಜಣ್ಣ ಆಸ್ಪತ್ರೆಯ ತಂಡದ ಭರತ್, ಮಹೇಶ್ ಬಾಬು, ಚೇತನ್ ಉಪಸ್ಥಿತರಿದ್ದರು.