ಬೇಲೂರು: ಪ್ರತಿಯೊಬ್ಬರು ಕಣ್ಣಿನ ಸ್ವಚ್ಛತೆ ಹಾಗೂ ಆರೋಗ್ಯ ಕುರಿತು ಜಾಗ್ರತೆ ವಹಿಸಬೇಕು ಎಂದು ಶ್ರೀಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರೂ ಆದ ಹಿರಿಯ ವೈದ್ಯಾಧಿಕಾರಿ ಡಾ.ನಾರಾಯಣಸ್ವಾಮಿ ಸಲಹೆ ನೀಡಿದರು.
ಬೇಲೂರು ತಾಲೂಕಿನ ಬಿಕ್ಕೋಡು ಸಮೀಪದ ಚಳ್ಳೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಸಂಸ್ಥೆಯಿಂದ ಶನಿವಾರ ಆಯೋಜಿಸಿದ್ದ ಕಣ್ಣಿನ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ತಮ್ಮ ಜಂಜಾಟದ ನಡುವೆ ಆರೋಗ್ಯವನ್ನು ಕಡೆಗಣಿಸುತಿದ್ದಾರೆ. ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಆದರೆ ಕೆಲಸದ ನಡುವೆಯೂ ಆರೋಗ್ಯದತ್ತ ಎಲ್ಲರೂ ಗಮನ ಹರಿಸಿದರೆ ಉತ್ತಮ ಜೀವನ ನಡೆಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಕೆಲವರು ಕಂಪ್ಯೂಟರ್ ಹಾಗೂ ಮೊಬೈಲ್‌ಗಳ ಹೆಚ್ಚಿನ ಬಳಕೆಯಿಂದಾಗಿ ಕಣ್ಣಿನ ಸಮಸ್ಯೆ ಸಾಮಾನ್ಯವಾಗಿದೆ. ಇದರಿಂದಾಗಿ ಕಣ್ಣುಗಳಿಗೆ ಆಯಾಸ, ಕೆಂಗಣ್ಣು, ಕಣ್ಣು ನೋವು, ತುರಿಕೆ, ಕಣ್ಣಿನಿಂದ ನೀರು ಸೋರುವುದು ಸೇರಿದಂತೆ ಇತರ ರೋಗಗಳಿಗೆ ತುತ್ತಾಗುವುದನ್ನು ಕಾಣುತಿದ್ದೇವೆ. ಹೀಗಾಗಿ ವರ್ಷಕ್ಕೊಮ್ಮೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬೇಲೂರು ಲಯನ್ಸ್ ಸಂಸ್ಥೆ ಅಧ್ಯಕ್ಷ ಅಬ್ದುಲ್ ಲತೀಫ್ ಮಾತನಾಡಿ, ಇತ್ತೀಚಿನ ದಿನದಲ್ಲಿ ಮಕ್ಕಳು ಹೆಚ್ಚಾಗಿ ಮೊಬೈಲ್ ಬಳಕೆಯಿಂದ ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮೊಬೈಲ್, ಕಂಪ್ಯೂಟರ್ ಬಳಕೆಯಿಂದ ದೂರ ಇರಬೇಕು ಎಂದು ಹೇಳಿದರು.
ಲಯನ್ಸ್ ಸಂಸ್ಥೆ ಪದಾಧಿಕಾರಿಗಳಾದ ಶ್ರೀಧರ್, ಆದರ್ಶ, ಕಾಂತರಾಜು ಇತರರು ಇದ್ದರು.