ತುಮಕೂರು : ಮಹಿಳೆಯರು ಮತ್ತು ಮಕ್ಕಳ ಕಳ್ಳ ಸಾಗಣೆ ಹಾಗೂ ಮತ್ತಿತರ ಅನೈತಿಕ ಚಟುವಟಿಕೆಗಳಿಗೆ ಬಡ ಹೆಣ್ಣು ಮಕ್ಕಳನ್ನೇ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಬಾಲಭವನದಲ್ಲಿ ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ‘ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಣೆ ತಡೆಗಟ್ಟುವಿಕೆ ಕುರಿತ ಕ್ರಮಬದ್ಧ ಕಾರ್ಯವಿಧಾನ ಮಾರ್ಗಸೂಚಿ ಬಗ್ಗೆ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. 21ನೇ ಶತಮಾನದ ನಾಗರಿಕ ಸಮಾಜದಲ್ಲಿಯೂ ಮಹಿಳೆಯರು ಮತ್ತು ಮಕ್ಕಳನ್ನು ಅನೈತಿಕ ಚಟುವಟಿಕೆಗಳಿಗೆ ಬಲವಂತವಾಗಿ ದೂಡುವ ಪರಿಸ್ಥಿತಿಯಲ್ಲಿ ನಾವಿರುವುದು ಶೋಚನೀಯ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಮಹಿಳೆಯರು ತಮಗೆ ಅರಿವಿಲ್ಲದೆಯೇ ಇಂತಹ ಸಮಸ್ಯೆಗಳಿಗೆ ಸಿಲುಕಿ ಕೊಳ್ಳುತ್ತಾರೆ, ಬಡ ಕುಟುಂಬದ ಹೆಣ್ಣು ಮಕ್ಕಳು ಅಥವಾ ಮಹಿಳೆಯರನ್ನು ಸಣ್ಣ ಪುಟ್ಟ ಆಮಿಷಗಳಿಗೆ ಒಳಗಾಗಿಸಿ, ಉದ್ಯೋಗದ ಭರವಸೆ ಹುಟ್ಟಿಸಿ ಅವರನ್ನು ಮಾರಾಟ ಮಾಡುವುದು, ಅನೈತಿಕ ಚಟುವಟಿಕೆ ಬಳಸಿಕೊಳ್ಳಲಾಗುತ್ತಿದೆ ಎಂದರು.
ಮಹಿಳೆಯರನ್ನು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುವ ವ್ಯವಸ್ಥಿತ ಜಾಲಗಳು ಮಾಧ್ಯಮ ಮತ್ತು ಆರಕ್ಷಕರಿಗೆ ಸುಳಿವು ಸಿಕ್ಕದಂತೆ ತಮ್ಮ ಕಾರ್ಯ ಸಾಧಿಸುತ್ತಾರೆ, ಹಲವಾರು ಪ್ರಕರಣಗಳಲ್ಲಿ ಸೂಕ್ತ ಸಾಕ್ಷಿಗಳು ದೊರೆಯದ ಕಾರಣ ಕಳ್ಳ ಸಾಗಾಣಿಕೆ ಮಾಡುವ ಮಧ್ಯವರ್ತಿಗಳು ಹಾಗೂ ತಪ್ಪಿತಸ್ಥರು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದರು. ನಿಟ್ಟಿನಲ್ಲಿ ಪೊಲೀಸ್ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ ಹಾಗೂ ಸಂಬಂಧಿಸಿದ ಇಲಾಖೆಗಳು ಸಾಕ್ಷ್ಯಗಳ ನಿರ್ವಹಣೆಯ ಬಗ್ಗೆ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.
ರಾಜ್ಯ ಉನ್ನತ ಅಧಿಕಾರಿ ಸಮಿತಿ ಹಾಗೂ ಮಾನವ ಕಳ್ಳ ಸಾಗಣೆ ಕೋರ್ ಕಮಿಟಿ ಸದಸ್ಯ ವಿಲಿಯಮ್ ಕ್ರಿಸ್ಟೋಫರ್ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆಯಲ್ಲಿ ವಿವಿಧ ರೂಪಗಳಿವೆ ಎಂದರು. ಸುಲಭವಾಗಿ ಹಣಗಳಿಸಲು ಡ್ರಗ್ಸ್, ಅಪಹರಣ, ವೇಶ್ಯಾವಟಿಕೆಗಳಂತಹ ಮಾರ್ಗಗಳನ್ನು ಅನುಸರಿಸುತ್ತಾರೆ. ಮಕ್ಕಳ ಭಿಕ್ಷಾಟನೆ, ಮಹಿಳೆಯರ ಶೋಷಣೆ ಎಲ್ಲಾದರೂ ಕಂಡು ಬರುವ ಮೊದಲೇ ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತೆಯರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ಶಾಲಾ ಮಕ್ಕಳಿಗೆ ಬ್ಯಾಗ್ ವಿತರಿಸಲಾಯಿತು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎಸ್.ಶ್ರೀಧರ್, ಶಿವಕುಮಾರಯ್ಯ ಇದ್ದರು.
ಕೆಲ ಪ್ರಕರಣಗಳಷ್ಟೇ ಬೆಳಕಿಗೆ : 2015ರಲ್ಲಿ ಮಹಿಳೆ ಮತ್ತು ಮಕ್ಕಳ ಕಳ್ಳ ಸಾಗಣೆಗೆ ಬಲಿಯಾದವರಿಗೆ ಪರಿಹಾರ ನೀಡುವ ಉದ್ದೇಶದಿಂದ ಕ್ರಮಬದ್ಧ ಕಾರ್ಯವಿಧಾನ ಮಾರ್ಗಸೂಚಿಗಳ ಯೋಜನೆಯನ್ನು ಜಾರಿಗೆ ತರಲಾಯಿತು ಎಂದು ಅಧ್ಯಕ್ಷತೆವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ತಿಳಿಸಿದರು. ಜನರಿಗೆ ಮಹಿಳೆ ಮತ್ತು ಮಕ್ಕಳ ಕಳ್ಳ ಸಾಗಣೆ ಬಗ್ಗೆ ಮಾಹಿತಿ ನೀಡುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ, ದೇಶದಲ್ಲಿ ಲಕ್ಷಾಂತರ ಮಕ್ಕಳು ಕಳ್ಳ ಸಾಗಣೆಗೆ ಬಲಿಯಾಗುತ್ತಿದ್ದರೂ ಕೆಲ ಪ್ರಕರಣಗಳು ಬೆಳಕಿಗೆ ಬರುತ್ತವೆ ಎಂದರು.
ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಶಿಕ್ಷಕರು, ಆರೋಗ್ಯಾಧಿಕಾರಿಗಳು ಹಾಗೂ ಸಾರ್ವಜನಿಕರು ಇಂತಹ ಸಮಸ್ಯೆಗಳತ್ತ ಗಮನ ಹರಿಸಬೇಕು, ಮಕ್ಕಳಿಗೆ ಪ್ರತಿ ಹಂತದಲ್ಲೂ ಶಿಕ್ಷಣ ನೀಡುವ ಮೂಲಕ ಬಡತನವನ್ನು ಕಡಿಮೆ ಮಾಡಬೇಕು, ಮಕ್ಕಳಲ್ಲಿ ಜ್ಞಾನದ ಹಣತೆ ಹಚ್ಚುವ ಮೂಲಕ ಇಂತಹ ಸಮಸ್ಯೆಗಳನ್ನು ದೂರವಿಡಬಹುದು ಎಂದರು.