ಕಂಪ್ಲಿ ತಾಲೂಕಿನ ಕಣವಿ ತಿಮ್ಮಲಾಪುರ ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿರುವ ರಾಮಸಾಗರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು. 
ಜಿಲ್ಲೆ

ಕಣವಿ ತಿಮ್ಮಲಾಪುರಕ್ಕೆ ಶನಿವಾರ ಬಸ್ ಸೌಲಭ್ಯ ಕಲ್ಪಿಸಲಿ

ಕಂಪ್ಲಿ: ತಾಲೂಕಿನ ಕಣವಿ ತಿಮ್ಮಲಾಪುರ ವಿದ್ಯಾರ್ಥಿಗಳಿಗೆ ಪ್ರತಿ ಶನಿವಾರ ಶಾಲೆ ಬಿಟ್ಟೊಡನೆ ಆರು ಕಿ.ಮೀ. ನಡೆದು ಮನೆ ಸೇರಬೇಕಿದೆ. ಸಕಾಲಕ್ಕೆ ಬಸ್ ವ್ಯವಸ್ಥೆ ಇಲ್ಲದಿದ್ದರಿಂದ ತೊಂದರೆಪಡುತ್ತಿದ್ದಾರೆ.

ರಾಮಸಾಗರದ ಸರ್ಕಾರಿ ಪ್ರೌಢಶಾಲೆಗೆ ಕಣವಿ ತಿಮ್ಮಲಾಪುರದಿಂದ 8ರಿಂದ 10ನೇ ತರಗತಿ ತನಕ ಓದುವ ಸುಮಾರು 60ವಿದ್ಯಾರ್ಥಿಗಳಿದ್ದಾರೆ. ಶನಿವಾರ ಮಧ್ಯಾಹ್ನ 12ಗಂಟೆಗೆ ಶಾಲೆ ಬಿಡುತ್ತದೆ.

ಐದು ಕಿ.ಮೀ.ದೂರದ ಕಣವಿ ತಿಮ್ಮಲಾಪುರಕ್ಕೆ ತೆರಳಲು ವಿದ್ಯಾರ್ಥಿಗಳು 2ಕಿ.ಮೀ.ಕ್ರಮಿಸಿ ಸಿದ್ಧೇಶ್ವರ ಕ್ರಾಸ್‌ಗೆ ಬರಬೇಕಿದೆ. ಆದರೆ, ಮಧ್ಯಾಹ್ನ ಎರಡು ಗಂಟೆಗೆ ಬಸ್ ಇರುವುದರಿಂದ ಎರಡು ತಾಸು ಕಾಯಲಿಚ್ಛಿಸದ ವಿದ್ಯಾರ್ಥಿಗಳು ಆರೇಳು ಕಿ.ಮೀ. ಕಾಲ್ನಡಿಗೆ ಮೂಲಕ ಮನೆ ತಲುಪಬೇಕಿದೆ.

ಶನಿವಾರ ಮಧ್ಯಾಹ್ನ 2ಗಂಟೆ ಬದಲಿಗೆ ರಾಮಸಾಗರದಲ್ಲಿ 12.30ಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಮಳೆ, ಗಾಳಿ, ಚಳಿ, ಬಿಸಿಲು ಮಧ್ಯೆಯೇ ಆರು ಕಿ.ಮೀ.ನಷ್ಟು ದೂರ ನಡೆದುಕೊಂಡು ಕಣವಿ ತಿಮ್ಮಲಾಪುರ ಸೇರಬೇಕು.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶನಿವಾರ ಮಧ್ಯಾಹ್ನ 12.30ಕ್ಕೆ ರಾಮಸಾಗರ ಬಸ್ ನಿಲ್ದಾಣದಲ್ಲಿ ಕಣವಿ ತಿಮ್ಮಲಾಪುರಕ್ಕೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ರಾಮಸಾಗರ ಸರ್ಕಾರಿ ಪ್ರೌಢಶಾಲೆಯ ಕಣವಿ ತಿಮ್ಮಲಾಪುರ ಗ್ರಾಮದ ವಿದ್ಯಾರ್ಥಿಗಳಾದ ಎನ್.ಅಂಜಲಿ, ಎನ್.ಆನಂದಿ, ಎನ್.ಹುಲಿಗೆಮ್ಮ,ಉಷಾ, ಎಚ್.ಈರಮ್ಮ, ಎಚ್.ಕೃಷ್ಣಹಳ್ಳಿ, ರಮೇಶ, ಎನ್.ಕೇಶವ, ಹನುಮೇಶ ಇತರರು ಒತ್ತಾಯಿಸಿದರು.

ಸಂಚಾರಿ ನಿಯಂತ್ರಕ ಕಂಪ್ಲಿ

ಯು.ಆದಿಶೇಷ

ಶನಿವಾರ ಮಕ್ಕಳು ಕಣವಿ ತಿಮ್ಮಲಾಪುರಕ್ಕೆ ನಡೆದುಕೊಂಡು ಹೋಗುತ್ತಾರೆ. ಬಸ್ ವ್ಯವಸ್ಥೆ ಕಲ್ಪಿಸಬೇಕು ಎನ್ನುವ ವಿಚಾರ ಗಮನಕ್ಕೆ ಬಂದಿದೆ. ಹಿರಿಯ ಅಧಿಕಾರಿಗಳಿಗೆ ತಿಳಿಸಿ ಬಸ್ ವ್ಯವಸ್ಥೆ ಕಲ್ಪಿಸುವ ಕ್ರಮ ಕೈಗೊಳ್ಳುತ್ತೇನೆ.