ಆಲೂರು: ತಾಲೂಕಿನ ಕಣತೂರು ಗ್ರಾಮದಲ್ಲಿರುವ ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ವೀರಭದ್ರೇಶ್ವರಸ್ವಾಮಿ ಮತ್ತು ಶ್ರೀ ದೇವಿರಮ್ಮ ದೇಗುಲದ ನೂತನ ವಿಮಾನ ಗೋಪುರ ಪ್ರತಿಷ್ಠಾಪನಾ ಕಾರ್ಯಕ್ರಮ ಮೇ 25 ಮತ್ತು 26 ರಂದು ನಡೆಯಲಿದೆ.
ಗುರುವಾರ ಗೋಧೂಳಿ ಲಗ್ನದಲ್ಲಿ ಮಹಾ ಗಣಪತಿ ಪೂಜೆ, ಪುಣ್ಯಾಹ, ದೇವಾಲಯ ಮತ್ತು ಗೋಪುರ ಸಂಪ್ರೋಕ್ಷಣೆ, ನವಗ್ರಹ ಸಹಿತ ಪ್ರತಿಷ್ಠಾಪನಾಂಗ ಕಳಸ ಸ್ಥಾಪನೆ, ಹೋಮ, ಪೂರ್ಣಾಹುತಿ ಇತರ ಧಾರ್ಮಿಕ ವಿಧಿಗಳು ನೆರವೇರಲಿವೆ.
26ರ ಬೆಳಗ್ಗೆ 7 ರಿಂದ 8ರವರೆಗೆ 101 ಕಳಸ ಪೂಜೆ ಮೂಲಕ ಮೆರವಣಿಗೆ ನಡೆಸಲಾಗುವುದು. ನಂತರ ದೇವರಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಕೈಂಕರ‌್ಯಗಳು ನಡೆಯಲಿವೆ. ದೇಗುಲಕ್ಕೆ ಬಂದ ಭಕ್ತರಿಗೆ ಅನ್ನದಾಸೋಹವೂ ಇದೆ. ಬೆಳಗ್ಗೆ 11ಕ್ಕೆ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾರ್ಜುವಳ್ಳಿ ಹಿರೇಮಠದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಭೆಯ ಉದ್ಘಾಟನೆಯನ್ನು ಶಾಸಕ ಸಿಮೆಂಟ್ ಮಂಜು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಕುಮಾರಸ್ವಾಮಿ, ಪ್ರೀತಂ ಗೌಡ ಸೇರಿದಂತೆ ವಿವಿಧ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ. .