ಜಿಲ್ಲೆ

ಕಣಜೀರಿಗೆ ಕಡಿತಕ್ಕೂ ಉಂಟು ಪರಿಹಾರ

ಮುಂಡಗೋಡ: ಕಣಜೀರಿಗೆ ಹುಳು ಕಚ್ಚಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 15 ಲಕ್ಷ ರೂ. ಪರಿಹಾರ ಹಾಗೂ ಐದು ವರ್ಷದವರೆಗೆ ಪ್ರತಿ ತಿಂಗಳು 4 ಸಾವಿರ ರೂ. ಮಾಸಾಶನ ನೀಡಲು ಸರ್ಕಾರ ಆದೇಶ ಹೊರಡಿಸಿದೆ.

ತಾಲೂಕಿನ ಮೈನಳ್ಳಿ ಪಂಚಾಯಿತಿ ವ್ಯಾಪ್ತಿಯ ಕಳಕಿಕಾರೆ ಗ್ರಾಮದ ಜನ್ನು ದೂಳು ಕೊಕರೆ ಎಂಬಾತನು 2023ರ ಸೆ. 9ರಂದು ಸಂಜೆಯ ವೇಳೆ ಬಡ್ಡಿಗೇರಿ ಕ್ರಾಸ್ ಹತ್ತಿರ ನಡೆದು ಹೋಗುತ್ತಿದ್ದಾಗ ಕಣಜೀರಿಗೆ ಹುಳು ಕಚ್ಚಿದ್ದರಿಂದ ತೀವ್ರ ಅಸ್ವಸ್ಥಗೊಂಡಿದ್ದನು. ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್್ಸ್ಸೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಯುವಕ ಸಾವನ್ನಪ್ಪಿದ್ದ. ನಂತರ ಮೃತನ ಕುಟುಂಬದವರು ಪರಿಹಾರ ಕೋರಿ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅರಣ್ಯ ಇಲಾಖೆಯವರು ಕಣಜೀರಿಗೆ ಹುಳು ಕಚ್ಚಿದರೆ ಯಾವುದೇ ಪರಿಹಾರ ಕೊಡಲು ಅವಕಾಶವಿಲ್ಲ ಎಂದು ಮೃತನ ಕುಟುಂಬಕ್ಕೆ ಹಿಂಬರಹ ನೀಡಿದ್ದರು.

ನಂತರ ಮೃತನ ಕುಟುಂಬಸ್ಥರು ಶಾಸಕ ಶಿವರಾಮ ಹೆಬ್ಬಾರ ಅವರ ಬಳಿ ಹೋಗಿ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ನಮ್ಮ ಮಗ ಕಣಜೀರಿಗೆ ಹುಳು ಕಡಿದು ಸಾವನ್ನಪ್ಪಿದ್ದಾನೆ. ಸರ್ಕಾರದಿಂದ ಪರಿಹಾರ ಕೊಡಿಸಿ ಎಂದು ವಿನಂತಿಸಿಕೊಂಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಹೆಬ್ಬಾರ ಮೃತನ ಕುಟುಂಬದವರು ತೀರ ಬಡವರಿದ್ದು, ಅವರಿಗೆ ಪರಿಹಾರ ನೀಡಬೇಕು ಎಂದು ಅರ್ಜಿ ಸಮಿತಿ ಮೇಲೆ ಒತ್ತಡ ಹಾಕಿದ್ದರು.

ನಂತರ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿಯೊಂದಿಗೆ ರ್ಚಚಿಸಿ ಮೃತಪಟ್ಟ ಯುವಕನ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ ಹಾಗೂ 5 ವರ್ಷದವರೆಗೆ ಪ್ರತಿ ತಿಂಗಳು 4 ಸಾವಿರ ರೂ. ಮಾಸಾಶನ ನೀಡುವಂತೆ ಸರ್ಕಾರದಿಂದ ಆದೇಶ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆದೇಶದಿಂದ ಬಡ ಕುಟುಂಬಕ್ಕೆ ಹೆಚ್ಚಿನ ಅನುಕೂಲವಾಗಿದೆ.

ಕಾಡುಪ್ರಾಣಿಗಳಿಂದ ಜೀವ ಹಾನಿ, ಬೆಳೆ ಹಾನಿ ಆದಾಗ ಮಾತ್ರ ಅರಣ್ಯ ಇಲಾಖೆ ಪರಿಹಾರ ನೀಡುತ್ತಿತ್ತು. ಇದೀಗ ಕಣಜೀರಿಗೆಹುಳು ಕಚ್ಚಿ ಗಾಯಗೊಂಡರೆ ಅಥವಾ ಸಾವನ್ನಪ್ಪಿದರೆ ಪರಿಹಾರ ಸಿಗುವಂತಾಗಿದೆ. ಅರಣ್ಯ ಭಾಗದಲ್ಲಿ ವಾಸಿಸುವ ಗೌಳಿ ಹಾಗೂ ಸಿದ್ದಿ ಸಮುದಾಯಕ್ಕೆ ಈ ಆದೇಶ ಹೆಚ್ಚು ಅನುಕೂಲವಾಗಲಿದೆ. ಕಣಜೀರಿಗೆ ಹುಳು ಕಡಿದಿದ್ದರಿಂದ ಮೃತಪಟ್ಟ ಯುವಕನ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ಕೊಡಿಸುವಲ್ಲಿ ಶಾಸಕ ಶಿವರಾಮ ಹೆಬ್ಬಾರ ಯಶಸ್ವಿಯಾಗಿದ್ದು, ಅರಣ್ಯದಲ್ಲಿ ವಾಸಿಸುವ ಗೌಳಿ, ಸಿದ್ದಿ ಸಮುದಾಯದ ಜನತೆಗೆ ಈ ಆದೇಶದಿಂದ ಅನುಕೂಲವಾಗಲಿದೆ. | ದೇವು ಪಾಟೀಲ, ಗೌಳಿ ಸಮುದಾಯ ಮುಖ್ಯಸ್ಥ
ಕಣಜೀರಿಗೆ ಹುಳು ಕಚ್ಚಿ ಸಾವನ್ನಪ್ಪಿದರೆ ನಮ್ಮ ಇಲಾಖೆಯಲ್ಲಿ ಯಾವುದೆ ಪರಿಹಾರ ವಿತರಣೆಗೆ ಅವಕಾಶ ಇಲ್ಲದಾಗಿತ್ತು. ಆದರೆ, ಇದೀಗ ಹೊಸದಾಗಿ ಆದೇಶವಾಗಿದ್ದು, ಕಣಜೀರಿಗೆ ಹುಳು ಕಚ್ಚಿ ಸಾವನ್ನಪ್ಪಿದ ಕುಟುಂಬದವರಿಗೆ 15 ಲಕ್ಷ ರೂ. ಪರಿಹಾರ ಹಾಗೂ 5 ವರ್ಷಗಳವರೆಗೆ ಪ್ರತಿ ತಿಂಗಳು 4 ಸಾವಿರ ರೂ. ಮಾಸಾಶನ ನೀಡಲು ಆದೇಶವಾಗಿದೆ. | ವಾಗೀಶ ಆರ್​ಎಫ್​ಒ, ಮುಂಡಗೋಡ