ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ
ಪಟ್ಟಣ ಸೇರಿದಂತೆ ಹೋಬಳಿಯ ಪ್ರಮುಖ ಹಿಂಗಾರಿ ವಾಣಿಜ್ಯ ಬೆಳೆಯಾಗಿರುವ ಕಡಲೆ ಕಟಾವು ಪ್ರಾರಂಭವಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಕಡಲೆ ಬೆಲೆ ಕುಸಿತವಾಗುತ್ತಿದೆ. ಕಳೆದ ವಾರ ಕ್ವಿಂಟಾಲ್ಗೆ ಐದು ಸಾವಿರ ರೂ. ಬೆಲೆ ಇತ್ತು. ಈ ವಾರ ಇದು ನಾಲ್ಕು ಸಾವಿರ ರೂ.ಗೆ ಇಳಿಕೆ ಕಂಡಿದೆ. ಈ ವರ್ಷವೂ ಕ್ವಿಂಟಾಲ್ ಕಡಲೆಗೆ 5100 ರೂ. ಬೆಂಬಲ ಬೆಲೆ ನಿಗದಿಯಾಗಿದೆ. ಆದರೆ, ಸರ್ಕಾರ ಈವರೆಗೂ ಖರೀದಿ ಕೇಂದ್ರ ಆರಂಭಿಸಿಲ್ಲ.
ಕೋಡಿಕೊಪ್ಪ, ಕೊಚಲಾಪೂರ, ಅಬ್ಬಿಗೇರಿ, ಡ.ಸ. ಹಡಗಲಿ, ಯರೇಬೇಲೇರಿ, ಗುಜಮಾಗಡಿ, ಕುರಡಗಿ, ತೋಟಗಂಟಿ, ದ್ಯಾಂಪೂರ, ಮಲ್ಲಾಪೂರ, ಬೂದಿಹಾಳ, ಜಕ್ಕಲಿ, ಮಾರನಬಸರಿ, ಹಾಲಕೆರೆ, ನಿಡಗುಂದಿ, ನಿಡಗುಂದಿಕೊಪ್ಪ ಗ್ರಾಮಗಳಲ್ಲಿ ಸುಮಾರು 26 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆ ಮಾಡಲಾಗಿದೆ. ಪ್ರತಿ ಎಕರೆಗೆ 3-4 ಕ್ವಿಂಟಾಲ್ ಇಳುವರಿ ಬರುವ ನಿರೀಕ್ಷೆ ಇದೆ. ಆದರೆ, ಮಾರುಕಟ್ಟೆಯಲ್ಲಿ ಕಡಲೆ ಬೆಲೆ ಕುಸಿತ ಕಾಣುತ್ತಿದೆ. ಆದ್ದರಿಂದ, ಸರ್ಕಾರ ತಕ್ಷಣ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಿ ರೈತರ ನೆರವಿಗೆ ಧಾವಿಸಬೇಕಿದೆ ಎಂದು ರೈತರು ಆಗ್ರಹಿಸುತ್ತಿದ್ದಾರೆ.
ರೈತರು ಕಡಲೆ ಬೀಜ ಬಿತ್ತನೆ ಮಾಡುವಾಗ ಬೆಲೆ ಹೆಚ್ಚಿರುತ್ತದೆ. ರೈತ ಸಂಪರ್ಕ ಕೇಂದ್ರದಿಂದ ಸಹಾಯಧನದಲ್ಲಿ ಪ್ರತಿ ಕ್ವಿಂಟಾಲ್ಗೆ 4500ರೂ.ಗಳಂತೆ ಖರೀದಿಸಿದರೆ, ಖಾಸಗಿಯವರಿಂದ 5 ರಿಂದ 6 ಸಾವಿರ ರೂ. ನೀಡಿ ಖರೀದಿಸಿದ್ದಾರೆ. ಆದರೆ, ರೈತರು ಕಷ್ಟಪಟ್ಟು ಬೆಳೆದ ಫಸಲು ಮಾರುಕಟ್ಟೆ ತಲುಪುವ ಹಂತದಲ್ಲೇ ದಿಢೀರ್ ಬೆಲೆ ಕುಸಿತ ಆಗುತ್ತಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಮಧ್ಯೆ ರಾಶಿ ಮಾಡಿದ ರೈತರಿಗೆ ಹಣಕಾಸಿನ ತೊಂದರೆ ಇದ್ದು ಅವರು ಅನಿವಾರ್ಯವಾಗಿ ಕಡಲೆ ಮಾರಾಟ ಮಾಡಬೇಕಾದ ಸ್ಥಿತಿ ಇದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖರೀದಿದಾರರು ಬೇಕಾಬಿಟ್ಟಿ ಬೆಲೆಗೆ ಕಡಲೆ ಖರೀದಿಸುತ್ತಿದ್ದಾರೆ.
ಕಳೆದ ಸಾಲಿನಲ್ಲಿ ಪ್ರತಿ ರೈತರಿಂದ ಗರಿಷ್ಠ 10 ಕ್ವಿಂಟಾಲ್ ಖರೀದಿಸಲಾಗಿತ್ತು. ಈ ಮಿತಿಯನ್ನು ವರ್ಷ 20 ಕ್ವಿಂಟಾಲ್ಗೆ ಹೆಚ್ಚಿಸಬೇಕು ಎಂಬುದು ರೈತರ ಒತ್ತಾಯವಾಗಿದೆ. ಜಿಲ್ಲಾಡಳಿತದಿಂದ ಕಡಲೆ ಖರೀದಿ ಕೇಂದ್ರ ಪ್ರಾರಂಭಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರದಿಂದ ಅನುಮೋದನೆ ಬಂದ ತಕ್ಷಣ ಖರೀದಿ ಕೇಂದ್ರ ಪ್ರಾರಂಭಿಸಲಾಗುವುದು. | ಎಂ. ಸುಂದರೇಶಬಾಬು ಗದಗ ಜಿಲ್ಲಾಧಿಕಾರಿ
ರೈತರ ಫಸಲು ಬಂದಾಗಲೇ ಮಾರುಕಟ್ಟೆಯಲ್ಲಿ ದರ ಕುಸಿಯುವುದು ಏಕೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವ ಕಾರ್ಯ ಈವರೆಗೂ ಆಗಿಲ್ಲ. ರೈತರು ಬೆಳೆದ ಬೆಳೆಯನ್ನು ಬೇಕಾಬಿಟ್ಟಿ ದರಕ್ಕೆ ಮಾರುವ ಅನಿವಾರ್ಯತೆ ಇದೆ. ಸರ್ಕಾರ ಕಡಲೆ ಖರೀದಿ ಕೇಂದ್ರ ಪ್ರಾರಂಭಿಸುವ ಮೂಲಕ ರೈತರ ನೆರವಿಗೆ ಧಾವಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ. | ಆನಂದ ಕೋಟಗಿ, ಚಂದ್ರು ಹೋನವಾಡ, ಶಶೀಧರ ಓದಿಸೋಮಠ ರೈತ ಮುಖಂಡರು, ನರೇಗಲ್ಲ