ಚಿಟಗುಪ್ಪ ತಾಲೂಕಿನ ಮಂಗಲಗಿಯಲ್ಲಿ ಶುಕ್ರವಾರ ಆಯೋಜಿಸಿದ್ದ ರಸ್ತೆ ಸುರಕ್ಷತೆ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಹೆಲ್ಮೆಟ್ ಧರಿಸಿದ ವಾಹನ ಸವಾರರಿಗೆ ಎಸ್‌ಪಿ ಪ್ರದೀಪ್ ಗುಂಟಿ ಹೂ ನೀಡಿ ಸ್ವಾಗತಿಸಿದರು. ಡಿವೈಎಸ್‌ಪಿ ಜೆ.ಎಸ್.ನ್ಯಾಮಗೌಡರ, ಸಿಪಿಐ ಶ್ರೀನಿವಾಸ ಅಲ್ಲಾಪುರೆ, ಪ್ರಮುಖರಾದ ಮಹೇಶ ಪಾಟೀಲ್, ರಾಜೇಶ ವಿಚಾರೆ, ಸಂಜೋಗ ಡೋಂಗ್ರೆ, ವಿಜೇಂದ್ರರೆಡ್ಡಿ, ನಾಗರಾಜ, ಸೋಮನಾಥ ಶಾಸ್ತಿç ಇತರರಿದ್ದರು. 
ಜಿಲ್ಲೆ

ಕಡ್ಡಾಯ ಸಂಚಾರ ನಿಯಮ ಪಾಲಿಸಿ

ಚಿಟಗುಪ್ಪ: ಸಂಚಾರ ನಿಯಮಗಳ ಉಲ್ಲಂಘನೆಯಿಂದ ಅವಘಡಗಳು ಸಂಭವಿಸುತ್ತಿವೆ. ಹೀಗಾಗಿ ಅತ್ಯಮೂಲ್ಯ ಜೀವ ಉಳಿಸಿಕೊಳ್ಳಲು ವಾಹನ ಚಾಲಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹೇಳಿದರು.

ತಾಲೂಕಿನ ಮಂಗಲಗಿ ಬಳಿಯ ಡೆಕ್ಕನ್ ಟೋಲ್‌ವೇಸ್ ಲಿಮಿಟೆಡ್ (ಡಿಟಿಎಲ್)ನ ಟೋಲ್ ಪ್ಲಾಜಾದಲ್ಲಿ ಶುಕ್ರವಾರ ನಡೆದ ರಸ್ತೆ ಸುರಕ್ಷತೆ ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚಾಲನೆ ರಹದಾರಿ ಪತ್ರ (ಲೈಸೆನ್ಸ್) ಇಲ್ಲದೆ ಹಾಗೂ ಹೆಲ್ಮೆಟ್ ರಹಿತ ಚಾಲನೆ ಅಪರಾಧವಾಗುತ್ತದೆ. ನಾಲ್ಕು ಚಕ್ರದ ವಾಹನ ಚಾಲನೆ ವೇಳೆ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು. ಇದರಿಂದ ಅನಾಹುತವನ್ನು ತಪ್ಪಿಸಬಹುದು ಎಂದರು.

ಹೆದ್ದಾರಿಗಳ ಮೇಲೆ ಚಲಿಸುವ ವಾಹನಗಳ ಚಾಲಕರು ನಿಯಮಗಳನ್ನು ಪಾಲಿಸಬೇಕು. ಹೆದ್ದಾರಿ ಮೇಲೆ ಅಥವಾ ಪಕ್ಕದಲ್ಲಿ ವಾಹನ ನಿಲ್ಲಿಸಬೇಡಿ ಎಂದು ಹೇಳಿದರು.

ಎನ್‌ಎಚ್‌ಎಐ ಪ್ರಾಧಿಕಾರದ ಯೋಜನಾಧಿಕಾರಿ ಮಹೇಶ ಪಾಟೀಲ್ ಮಾತನಾಡಿ, ರಸ್ತೆ ಸುರಕ್ಷತೆ ಬಗ್ಗೆ ಪ್ರಾಧಿಕಾರ ಸಹ ವಿಶೇಷ ಗಮನ ಹರಿಸುತ್ತಿದ್ದು, ಚಾಲಕರಿಗೆ ಜಾಗೃತಿ ಮೂಡಿಸುವ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಟೋಲ್​ವೇಜ್ ಮುಖ್ಯಸ್ಥ ರಾಜೇಶ ವಿಚಾರೆ ಮಾತನಾಡಿ, ಸುರಕ್ಷತಾ ಜಾಗೃತಿ ಮಾಸ ನಿಮಿತ್ತ ಕಂಪನಿ ವತಿಯಿಂದ ಶಾಲಾ ಮಕ್ಕಳಿಗೆ, ವಾಹನ ಚಾಲಕರಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಡಿಟಿಎಲ್ ಯೋಜನಾ ಮುಖ್ಯಸ್ಥ ರಾಜೇಶ, ಸಂಜೋಗ್ ಡೊಂಗ್ರೆ, ಡಿವೈಎಸ್‌ಪಿ ಜೆ.ಎಸ್. ನ್ಯಾಮೇಗೌಡ, ಸಿಪಿಐ ಶ್ರೀನಿವಾಸ ಅಲ್ಲಾಪುರ, ವಿಜೇಂದ್ರರೆಡ್ಡಿ, ನಾಗರಾಜ, ಸೋಮನಾಥ ಶಾಸ್ಟ್ರೀ ಇತರರಿದ್ದರು. ರೂಟ್ ಮ್ಯಾನೇಜರ್ ರೇವಣಸಿದ್ದಪ್ಪ ವಾಲಿ ಸ್ವಾಗತಿಸಿ ನಿರೂಪಣೆ ಮಾಡಿದರು.

ಗಮನ ಸೆಳೆದ ವೇಷಧಾರಿ ಯಮರಾಜ್: ಪ್ಲಾಜ್ ದಲ್ಲಿ ಹೋಗಿ ಬರುವ ವಾಹನ ಚಾಲಕರಿಗೆ ವೇಷದಾರಿ ಯಮರಾಜ್ ಪ್ರಯಾಣಿಕರು ಹೆಲ್ಮೆಟ್ ಮತ್ತು ಸುರಕ್ಷತಾ ಬೆಲ್ಟ್ ಧರಿಸುವಂತೆ ಮನವಿ ಮಾಡುತ್ತಿರುವುದು ವಿಶೇಷ ಗಮನ ಸೆಳೆಯಿತು. ಮಂಗಲಗಿ ಪ್ರೌಢ ಶಾಲೆ ವಿದ್ಯಾರ್ಥಿಗಳು ಹಾಗೂ ಸೇಂಟ್ ಮೇರಿ ಆಂಗ್ಲ ಮಾಧ್ಯಮ ಶಾಲಾ ಮಕ್ಕಳಿಂದ ರಸ್ತೆ ಸುರಕ್ಷತೆ ಬಗ್ಗೆ ಕಿರು ನಾಟಕ ಪ್ರದರ್ಶನ ಪ್ರದರ್ಶನ ಮಾಡಲಾಯಿತು. ಟೋಲ್​ಪ್ಲಾಜಾದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಯಿತು.