ಜಿಲ್ಲೆ

ಕಡೇ ಕ್ಷಣದಲ್ಲಿ ತಪ್ಪಿದ ವಾರ್ಡ್ ಹರಾಜು!, ಆಂಜನೇಯ ದೇಗುಲಕ್ಕೆ ಲಕ್ಷಾಂತರ ರೂ.ಬಿಡ್?,ಪಕ್ಷೇತರ ನಾಪಪತ್ರ ವಾಪಸ್ಒ, ಳ ಒಪ್ಪಂದ ಆರೋಪ

ರಾಜೇಶ್ಎ ಸ್.ಜಿ.ಮುಕ್ಕೇನಹಳ್ಳಿ

ಆಂಜನೇಯ ದೇಗುಲ ಜೀರ್ಣೋದ್ಧಾರಕ್ಕೆ ಯಾರು ಹೆಚ್ಚು ಹಣ ನೀಡುತ್ತಾರೋ ಅವರಿಗೆ ಸದಸ್ಯಗಿರಿ ನೀಡುವ ಬಗ್ಗೆ ಕೆಲ ದಿನಗಳಿಂದ ನಡೆಯುತ್ತಿದ್ದ ಹುನ್ನಾರಕ್ಕೆ ಅಧಿಕಾರಿಗಳ ಮಧ್ಯೆ ಪ್ರವೇಶದಿಂದ ತಡೆಬಿದ್ದಿದೆ.

ಗುರುವಾರ ಪಕ್ಷೇತರ ಅಭ್ಯರ್ಥಿಯೊಬ್ಬರು ನಾಮಪತ್ರ ವಾಪಸ್ ಪಡೆದಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಡಲಿದೆ. ಏತನ್ಮಧ್ಯೆ ಅಭ್ಯರ್ಥಿಯೊಬ್ಬರ ಪರವಾಗಿ ಲಾಭಿ ನಡೆಸುವ ಮತ್ತೊಂದು ಸುತ್ತಿನ ಒಳಒಪ್ಪಂದ ನಡೆಯುತ್ತಿದೆ ಎಂಬ ಆರೋಪ ದಟ್ಟವಾಗುತ್ತಿದೆ.

ನೇರ ಹಣಾಹಣಿ ಇರುವ ಇಬ್ಬರು ಅಭ್ಯರ್ಥಿಗಳ ಪೈಕಿ ಯಾರು ದೇಗುಲ ಅಭಿವೃದ್ಧಿಗೆ ಹೆಚ್ಚು ಹಣ ನೀಡಲು ಮುಂದಾಗುತ್ತಾರೋ ಅಂಥ ಅಭ್ಯರ್ಥಿಗೆ ಮತ ಹಾಕುವಂತೆ ಜನರನ್ನು ಓಲೈಸುವುದು, ಮತ್ತೊಬ್ಬ ಅಭ್ಯರ್ಥಿ ತೆರೆಮರೆಯಲ್ಲಿ ಹಣ ನೀಡಿದ ಅಭ್ಯರ್ಥಿಪರ ಕೆಲಸ ಮಾಡುವುದು ಎಂಬ ಮಾತುಕತೆ ನಡೆಯುತ್ತಿದೆ ಎಂಬ ಮಾತು ಹರಿದಾಡುತ್ತಿದೆ.

ಏನಿದು ಹರಾಜು?: ದೊಡ್ಡಬಳ್ಳಾಪುರ ಮುತ್ಸಂದ್ರ ವಾರ್ಡ್ ರಾಷ್ಟ್ರೀಯ ಪಕ್ಷದ ಇಬ್ಬರು ಅಭ್ಯರ್ಥಿಗಳು ಸೆಣಸಾಟಕ್ಕೆ ನಿಂತಿದ್ದಾರೆ, ಇದರ ನಡುವೆ ಕೆಲವೊಂದು ಮುಖಂಡರು ಇಲ್ಲಿನ ಆಂಜನೇಯ ದೇಗುಲದ ಜೀರ್ಣೋದ್ಧಾರಕ್ಕೆ ಯಾರು ಹೆಚ್ಚು ಹಣ ನೀಡುತ್ತಾರೊ ಅವರಿಗೆ ಸದಸ್ಯ ಗಾದಿ ಗಟ್ಟಿಗೊಳಿಸುವ ಚಿಂತನೆ ನಡೆಸಿದ್ದರು, ಉಳಿದವರು ನಾಮಪತ್ರ ವಾಪಸ್ ಪಡೆದು ಹೆಚ್ಚು ಹಣ ನೀಡಿದ ಅಭ್ಯರ್ಥಿಗೆ ಜಯಮಾಲೆ ತೊಡಿಸುವ ಬಗ್ಗೆ ಮಾತುಕತೆ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಹರಾಜು ತಕ್ಕಡಿಗೆ ಹಾಕಿದ್ದ ಮುತ್ಸಂದ್ರ ವಾರ್ಡ್‌ನಲ್ಲಿ ಬದಲಾದ ಸನ್ನಿವೇಶದಲ್ಲಿ ಓರ್ವ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದು ಇನ್ನಿಬ್ಬರ ದಾರಿ ಸುಗಮಗೊಳಿಸಿದ್ದಾರೆ.

35 ಲಕ್ಷ ರೂ.ಬಿಡ್: ಮುತ್ಸಂದ್ರ ವಾರ್ಡ್‌ನಲ್ಲಿರುವ ಪುರಾತನ ಆಂಜನೇಯ ದೇಗುಲ ಜೀರ್ಣೋದ್ಧಾರ ಕಾಮಗಾರಿ 8 ವರ್ಷದ ಹಿಂದೆಯೇ ಆರಂಭವಾಗಿದ್ದರೂ ನನೆಗುದಿಗೆ ಬಿದ್ದಿದೆ. ಇದೇ ವಿಷಯವನ್ನು ಚುನಾವಣೆಗೆ ಎಳೆತಂದಿರುವ ಕೆಲ ಮುಖಂಡರು ದೇಗುಲ ಪೂರ್ಣಗೊಳ್ಳಲು ಸುಮಾರು 35 ಲಕ್ಷ ರೂ.ವೆಚ್ಚವಾಗಲಿದೆ ಯಾವ ಅಭ್ಯರ್ಥಿ ಇಷ್ಟು ಹಣ ಮುಂಗಡವಾಗಿ ನೀಡುತ್ತಾರೋ ಅವರನ್ನು ಅವಿರೋಧ ಆಯ್ಕೆ ಮಾಡಬೇಕು. ಉಳಿದ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯಬೇಕೆಂಬ ಒಪ್ಪಂದಕ್ಕೆ ಬರುವ ಬಗ್ಗೆ ಮಾತುಕತೆ ನಡೆದಿತ್ತು ಎನ್ನಲಾಗಿದೆ.

ಕಣದಲ್ಲಿರುವವವರು: ಚುನಾವಣಾ ಕಣದಲ್ಲಿ ಕಾಂಗ್ರೆಸ್‌ನಿಂದ ದೀಪಾ ಕೃಷ್ಣಮೂರ್ತಿ, ಬಿಜೆಪಿಯಿಂದ ಸುಮಿತ್ರಾ ಆನಂದ್ ಕಣದಲ್ಲಿದ್ದು, ಪಕ್ಷೇತರ ಅಭ್ಯರ್ಥಿ ವಿ.ಆರ್.ಶೋಭಾ ಶಶಿಧರ್ ನಾಮಪತ್ರ ವಾಪಸ್ ಪಡೆದಿದ್ದಾರೆ.

ಅಧಿಕಾರಿಗಳ ಎಚ್ಚರಿಕೆ: ಹರಾಜು ಮಾತುಕತೆ ಬಗ್ಗೆ ವಿಷಯ ಹರಿದಾಡುತ್ತಿದ್ದಂತೆ ಎಚ್ಚೆತ್ತ ಚುನಾವಣಾ ವೀಕ್ಷಕರು ವಾರ್ಡ್‌ಗೆ ಭೇಟಿ ನೀಡಿ ಸದಸ್ಯ ಸ್ಥಾನ ಹರಾಜಿಗಿಡುವುದು ಚುನಾವಣಾ ನೀತಿ ಸಂಹಿತೆ ವಿರುದ್ಧವಾಗಿದೆ ಎಂದು ಅಭ್ಯರ್ಥಿಗಳಿಗೆ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಮುಖಂಡರು ಪಕ್ಷೇತರ ಅಭ್ಯರ್ಥಿಯಿಂದ ನಾಮಪತ್ರ ವಾಪಸ್ ಪಡೆಯುವಲ್ಲಿ ಯಶಕಂಡಿದ್ದು, ತೆರೆಮರೆಯಲ್ಲಿ ಅಭ್ಯರ್ಥಿಯೊಬ್ಬರ ಪರ ಲಾಭಿ ನಡೆಸುವ ಹುನ್ನಾರ ನಡೆಸುತ್ತಿದ್ದಾರೆ ಎಂಬ ಮಾತು ಮುನ್ನೆಲೆಗೆ ಬಂದಿದೆ.

ಯುವಕರ ಪ್ರತಿಭಟನೆ: ಚುನಾವಣೆ ನಡಸದೇ ಅಭ್ಯರ್ಥಿ ಆಯ್ಕೆ ಮಾಡುವ ಹುನ್ನಾರ ಯುವ ಮತದಾರರ ಕಿವಿಗೆ ಬೀದಿದ್ದು, ಅನೇಕರು ಸಿಡಿಮಿಡಿಗೊಂಡಿದ್ದಾರೆ. ಸ್ಪರ್ಧೆಯಿಂದ ಹಿಂದೆ ಸರಿಯದಂತೆ ಕಾಂಗ್ರೆಸ್ ಅಭ್ಯರ್ಥಿ ಮನೆ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. 8 ವರ್ಷದಿಂದ ದೇವಸ್ಥಾನ ಕಾಮಗಾರಿ ನನೆಗುದಿಗೆ ಬಿದ್ದಿರುವುದು ತಿಳಿದ ವಿಚಾರ. ಆದರೆ ಅಭ್ಯರ್ಥಿ ಕೊಡುವ ಹಣದಿಂದ ದೇವಸ್ಥಾನ ಜೀರ್ಣೋದ್ಧಾರ ಮಾಡುವುದು ಸರಿಯಲ್ಲ ಎಂಬ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೇಗುಲ ಜೀರ್ಣೋದ್ಧಾರಕ್ಕೆ ಬೇಕಿದ್ದರೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸೋಣ ಎಂಬುದು ಹಲವು ಮತದಾರರ ಒತ್ತಾಯವಾಗಿದೆ.