ಕಡೂರು ಪುರಸಭೆಯಿಂದ ಆಯೋಜಿಸಿದ್ದ ನಮ್ಮ ನಡೆ ಸಾರ್ವಜನಿಕರ ಕಡೆ ಹಾಗೂ ಇ-ಖಾತಾ ಅಭಿಯಾನಕ್ಕೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಚಾಲನೆ ನೀಡಿದರು. ಮಂಜುಳಾ ಚಂದ್ರು, ತೋಟದಮನೆ ಮೋಹನ್‌ಕುಮಾರ್, ಈರಳ್ಳಿ ರಮೇಶ್, ಮನು, ಯಾಸೀನ್ ಮತ್ತಿತರರಿದ್ದರು.  
ಜಿಲ್ಲೆ

ಕಡೂರಿನಲ್ಲಿ ಶೇ.40 ಇ-ಖಾತೆ ಬಾಕಿ

ಕಡೂರು: ಪುರಸಭೆ ವಾರ್ಡ್‌ಗಳಲ್ಲಿನ ನಾಗರಿಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಜನಸ್ನೇಹಿ ಆಡಳಿತಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ಛತ್ರದ ಬೀದಿಯ 1 ಮತ್ತು 2ನೇ ವಾರ್ಡ್‌ಗಳ ವ್ಯಾಪ್ತಿಯ ಸಾರ್ವಜನಿಕರಿಗೆ ಶ್ರೀ ಕೆಂಚಾಂಬಿಕಾ ದೇವಾಲಯದ ಆವರಣದಲ್ಲಿ ಪುರಸಭೆಯಿಂದ ಗುರುವಾರ ಆಯೋಜಿಸಿದ್ದ ನಮ್ಮ ನಡೆ ಸಾರ್ವಜನಿಕರ ಕಡೆ ಹಾಗೂ ಇ-ಖಾತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಾರ್ವಜನಿಕರ ಸಮಸ್ಯೆಗಳಿಗೆ ಯಾವುದೆ ದಲ್ಲಾಳಿಗಳಿಲ್ಲದೆ ಅಧಿಕಾರಿಗಳೇ ಬಂದು ಸಮಸ್ಯೆ ಆಲಿಸಲು ಉತ್ತಮ ವೇದಿಕೆ ನಿರ್ಮಿಸಿಕೊಡಲಾಗಿದೆ. ಇದಕ್ಕೆ ಪ್ರಾಯೋಗಿಕವಾಗಿ ಆರಂಭಿಸಿದ ನಮ್ಮ ನಡೆ ಸಾರ್ವಜನಿಕರ ಕಡೆ ಕಾರ್ಯಕ್ರಮಕ್ಕೆ ವಾರ್ಡ್ ವ್ಯಾಪ್ತಿಯ ಸಭೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಪುರಸಭೆಯ ಹಂತದಲ್ಲಿ ಆಗಬೇಕಿರುವ ಕಾರ್ಯಗಳು ಹಾಗೂ ಮೂಲಭೂತ ಸೌಕರ್ಯಗಳ ಜತೆಗೆ ಸ್ಥಳೀಯ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳ ಮೂಲಕ ಪರಿಹರಿಸಿಕೊಡುವ ಕಾರ್ಯ ಮಾಡಲಾಗುತ್ತದೆ ಎಂದರು.

ರಸ್ತೆ, ಚರಂಡಿಯಂತಹ ಕೆಲಸಗಳನ್ನು ಅನುದಾನ ಲಭ್ಯತೆಗೆ ಅನುಗುಣವಾಗಿ ಕೈಗೆತ್ತಿಕೊಳ್ಳಲಾಗುತ್ತದೆ. ಬಡಾವಣೆಯಲ್ಲಿನ ಸಣ್ಣ ಪುಟ್ಟ ಕೆಲಸಗಳನ್ನು ಶೀಘ್ರ ಮಾಡಲಾಗುವುದು. ಸಭೆಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ಪರಿಹರಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.

ಪಟ್ಟಣದಲ್ಲಿ 15 ಸಾವಿರ ಇ-ಸ್ವತ್ತುಗಳಿದ್ದು, 10 ಸಾವಿರ ಕಟ್ಟಡಗಳಿವೆ, 5 ಸಾವಿರ ನಿವೇಶನಗಳಿದ್ದು, ಶೇ.60 ಇ-ಖಾತೆಯಾಗಿದ್ದು ಉಳಿದ ಶೇ.40 ಖಾತೆಯಾಗದೆ ಉಳಿದಿವೆ. ಸಾರ್ವಜನಿಕರು ಇ-ಖಾತೆ ಪಡೆಯುವುದರಿಂದ ಆಸ್ತಿಯ ಮೌಲ್ಯ ಹೆಚ್ಚುತ್ತದೆ ಹಾಗೂ ಪುರಸಭೆ ವ್ಯಾಪ್ತಿಗೆ ಒಳಪಡುತ್ತದೆ. ಮಾಲೀಕತ್ವವು ದೃಢವಾಗಿರುತ್ತದೆ. ಅದಕ್ಕಾಗಿ ಇ-ಖಾತಾವನ್ನು ತಪ್ಪದೆ ಮಾಡಿಸಿಕೊಳ್ಳಬೇಕಿದೆ ಎಂದರು.

ಕುಡಿಯುವ ನೀರಿಗೆ 23 ವಾರ್ಡ್‌ಗಳಲ್ಲಿ ಎಲ್ಲಿಯೂ ಸಮಸ್ಯೆ ತಲೆದೋರದಂತೆ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದ 32 ಕಿ.ಮೀ ಎಚ್‌ಡಿಪಿ ಪೈಪ್‌ಲೈನ್ ಅಳವಡಿಸಲಾಗುತ್ತಿದ್ದು ಇದಕ್ಕೆ ಶಾಸಕ ಕೆ.ಎಸ್.ಆನಂದ್ ಸಹಕಾರ ನೀಡಿದ್ದಾರೆ. ಯುಜಿಡಿಗೆ 162 ಕೋಟಿ ಡಿಪಿಆರ್ ಆಗಿದ್ದು 33 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಪುರಸಭಾ ಸದಸ್ಯ ತೋಟದಮನೆ ಮೋಹನ್‌ಕುಮಾರ್ ಮಾತನಾಡಿ, ದಾಖಲೆಗಳು ಇಲ್ಲದವರನ್ನು ಗುರುತಿಸಿ ಇ-ಸ್ವತ್ತು ನೀಡಲು ಅಭಿಯಾನ ಆರಂಭವಾಗಿದ್ದು ನಿವಾಸಿಗರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಿದೆ ಎಂದರು.

ಸಭೆಯಲ್ಲಿ ಬಹುತೇಕ ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ಮುಖ್ಯವಾಗಿ 1ನೇ ವಾರ್ಡ್‌ನ ವಿಜಯಲಕ್ಷ್ಮೀ ಬಡಾವಣೆಯಲ್ಲಿ ಚರಂಡಿ ನೀರು ಸರಾಗವಾಗಿ ಹರಿಯಲು ಸಮರ್ಪಕ ದಾರಿ ಇಲ್ಲದೆ ಇರುವುದರ ಬಗ್ಗೆ ಸೂಕ್ತ ಜಾಗದ ವ್ಯವಸ್ಥೆ ನೀಡುವಂತೆ ಮತ್ತು ವಿಜಯಲಕ್ಷ್ಮೀ ಟಾಕೀಸ್ ಸಮೀಪ ಶೌಚಗೃಹ ನಿರ್ಮಿಸಲು ಅಪ್ರೋಜ್ ಒತ್ತಾಯಿಸಿದರು. ಟಿ.ಡಿಎಸ್.ಲಾಡ್ಜ್ ಮುಂಭಾಗದಿಂದ ಚಂದ್ರಮೌಳೇಶ್ವರ ದೇವಾಲಯದ ತನಕ ಚರಂಡಿ ನೀರು ಸರಗವಾಗಿ ಹರಿಯದೆ ರಸ್ತೆ ಮೇಲೆ ಹರಿದು ಧಾರ್ಮಿಕ ಕಾರ್ಯಗಳಿಗೆ ಸಮಸ್ಯೆಯಾಗುತ್ತಿದ್ದು ಪರಿಹರಿಸಲು ನಾಗರಿಕರು ಮನವಿ ಮಾಡಿದರು. 2ನೇ ವಾರ್ಡ್‌ನ ಬನ್ನಿ ಮರದಿಂದ ಸಾವರೆಹೊಳೆ ರಸ್ತೆ ದುರಸ್ತಿಗೆ ಮನವಿ, ಮಕ್ಕಳ ಸ್ಮಶಾನದ ಪಕ್ಕದ ಜಾಗದಲ್ಲಿ ರಸ್ತೆ ನಿರ್ಮಿಸಿದರೆ ಸುಮಾರು 30 ಕುಟುಂಬಗಳಿಗೆ ಸಂಚರಿಸಲು ರಸ್ತೆ ಸೌಲಭ್ಯ ಕಲ್ಪಿಸಿದಂತಾಗಲಿದೆ ಎಂದು ಸಾರ್ವಜನಿಕರು ಒತ್ತಾಯಿಸಿದರು. ರಹಮತ್ ನಗರದಲ್ಲಿ 50 ವರ್ಷಗಳಿಂದ ಚರಂಡಿ ನಿರ್ಮಿಸದೆ ಇರುವುದರಿಂದ ಪಟ್ಟಣದ ಬಹುತೇಕ ಚರಂಡಿ ನೀರು ಬಂದು ನಿಲ್ಲುತ್ತಿದ್ದು, ಈ ನೀರು ಮುಂದೆ ಸಾಗಲು ವ್ಯವಸ್ಥೆ ಕಲ್ಪಿಸಲು ರಹಮತ್ ನಗರದ ನಿವಾಸಿಗರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. 20ಕ್ಕೂ ಹೆಚ್ಚು ಅರ್ಜಿಗಳು ವಾರ್ಡ್‌ನ ನಾಗರಿಕರಿಂದ ಸಲ್ಲಿಕೆಯಾದವು.

ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸದಸ್ಯರಾದ ಈರಳ್ಳಿ ರಮೇಶ್, ಯಾಸೀನ್, ಮರುಗುದ್ದಿ ಮನು, ಸಂದೇಶ್‌ಕುಮಾರ್, ಗೋವಿಂದರಾಜ್, ಮೋಹನ್‌ನಾಯ್ಕ, ಸುಧಾ ಉಮೇಶ್, ಮಂಡಿ ಇಕ್ಬಾಲ್, ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್ ಹಾಗೂ ಸಿಬ್ಬಂದಿ ಇದ್ದರು.