ಚಿಕ್ಕಮಗಳೂರು: ಕಡೂರು ತಾಲೂಕು ಮದಗದ ಕೆರೆ ಬಳಿ ಅನುಮಾನಾಸ್ಪದವಾಗಿ ಮೃತಪಟ್ಟ ಚಿರತೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಚಿಕ್ಕನಾಯಕನಹಳ್ಳಿಯ ತುರುವೇಕೆರೆ ಸೆಕ್ಷನ್ನ ದೇವಿಹಳ್ಳ ಬಳಿ ಬೋನಿಗೆ ಬಿದ್ದ ಚಿರತೆಯನ್ನು ಕಡೂರಿನ ಮದಗದ ಕೆರೆ ಬಳಿ ಅರಣ್ಯ ಇಲಾಖೆ ಅಧಿಕಾರಿಗಳೇ ತಂದು ಬಿಟ್ಟಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಚಿರತೆಯನ್ನು ತಂದಿದೆ ಎನ್ನಲಾದ ಲಾರಿಯ ಸಿಸಿಟಿವಿ ವಿಡಿಯೋಗಳು ವೈರಲ್ ಆಗಿವೆ.
ಒಂದು ಭಾಗದಲ್ಲಿ ಸೆರೆಹಿಡಿದ ಚಿರತೆಗಳನ್ನು ಇನ್ನೊಂದು ಭಾಗದಲ್ಲಿ ಬಿಡುವಾಗ ಆ ಪ್ರದೇಶದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಜತೆಗೆ ಕೆಲ ಕಾನೂನುಗಳನ್ನು ಪಾಲಿಸಬೇಕು. ಆದರೆ ಮದಗದ ಕೆರೆ ಬಳಿ ಮೃತಪಟ್ಟ ಚಿರತೆಗೆ ಸಂಬಂಧಿಸಿದಂತೆ ಯಾವುದೇ ಕಾನೂನು ಪಾಲನೆ ಮಾಡದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅಲ್ಲದೆ ಚಿಕ್ಕನಾಯಕನಹಳ್ಳಿ ಆರ್ಎಫ್ಒ ವಿರುದ್ಧ ವನ್ಯಜಿವಿ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಚಿಕ್ಕನಾಯಕನಹಳ್ಳಿ ವಲಯ ಅರಣ್ಯಾಧಿಕಾರಿ ಅಮಿತ್ ನೇತೃತ್ವದಲ್ಲಿ ಮದಗದ ಕೆರೆ ಬಳಿ ಚಿರತೆ ಬಿಡಲಾಗಿದೆ ಎನ್ನಲಾಗುತ್ತಿದ್ದು, ಇದಕ್ಕೆ ಬಳಸಿದ ಮಿನಿ ಲಾರಿಯ ಹಲವು ಸಿಸಿ ಟಿವಿ ತುಣುಕುಗಳು ಸಾಯಾಗಿ ಲಭಿಸಿವೆ. ಅಮಿತ್ ಅರಸೀಕೆರೆ ವಲಯ ಅರಣ್ಯಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಆ ಭಾಗದಲ್ಲಿ ಬೋನು ಇಟ್ಟು ಸೆರೆ ಹಿಡಿದ ಚಿರತೆಗಳನ್ನು ಕಡೂರಿನ ಮದಗದ ಕೆರೆ ವ್ಯಾಪ್ತಿಯಲ್ಲಿ 7ಕ್ಕೂ ಹೆಚ್ಚು ಚಿರತೆ ಬಿಟ್ಟಿದ್ದಾರೆ ಎಂದು ವನ್ಯಜಿವಿ ಪ್ರೇಮಿಗಳು ಆರೋಪಿಸಿದ್ದಾರೆ.
ತರಾತುರಿಯಲ್ಲಿ ಕಾರ್ಯಾಚರಣೆ: ತುರುವೇಕೆರೆ ಸೆಕ್ಷನ್ ದೇವಿಹಳ್ಳಿ ಬಳಿ ಬೋನಿಗೆ ಬಿದ್ದ ಗಂಡು ಚಿರತೆಯನ್ನು ಮದಗದ ಕೆರೆ ವ್ಯಾಪ್ತಿಯಲ್ಲಿ ಬುಧವಾರ ತಡ ರಾತ್ರಿ ತಂದು ಬಿಡಲಾಗಿತ್ತು ಎನ್ನಲಾಗುತ್ತಿದೆ. ತುರುವೇಕೆರೆಯಿಂದ ಚಿರತೆ ತರುವಾಗ ಬಾಣಾವರ ಸಮೀಪದ ಟೋಲ್ನಲ್ಲಿ ಕೂಡ ಜಗಳ ಮಾಡಿಕೊಂಡು ಬಂದಿದ್ದಾರೆ ಎನ್ನಲಾಗುತ್ತಿದೆ. ಕಡೂರಿನಲ್ಲಿ ಚಿರತೆ ಸಾಗಣೆ ಮಾಡುತ್ತಿದ್ದ ಮಿನಿ ಲಾರಿ ಹಲವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜತೆಗೆ ವಲಯ ಅರಣ್ಯಾಧಿಕಾರಿ ಅಮಿತ್ ಇದ್ದ ಬೊಲೆರೋ ವಾಹನ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತರಾತುರಿಯಲ್ಲಿ ಚಿರತೆ ಬಿಟ್ಟು ಹೋಗಿದ್ದಾರೆ ಎಂದು ಗೌರವ ವನ್ಯಜಿವಿ ಪರಿಪಾಲಕ ವೀರೇಶ್ ಆರೋಪಿಸಿದ್ದಾರೆ.
ತನಿಖಾ ಸಮಿತಿ ರಚನೆ: ಕಡೂರಿನ ಮದಗದ ಕೆರೆ ಬಳಿ ಚಿರತೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯಿಂದ ಹಿರಿಯ ಅಧಿಕಾರಿಗಳನ್ನೊಳಗೊಂಡ ತನಿಖಾ ಸಮಿತಿ ರಚನೆ ಮಾಡಲಾಗಿದೆ. ತುರುವೇಕೆರೆಯಿಂದ ಚಿರತೆ ತಂದು ಬಿಡಲಾಗಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ತನಿಖಾ ಸಮಿತಿ ರಚಿಸಲಾಗಿದೆ. ಚಿಕ್ಕನಾಯಕನಹಳ್ಳಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ತಂದು ಬಿಟ್ಟಿರುವ ಆರೋಪ ನಿರಾಕರಿಸುತ್ತಿದ್ದಾರೆ. ಆದರೆ ವನ್ಯಜಿವಿ ಪ್ರಿಯರು ಚಿರತೆ ಸಾಗಣೆಯ ಸಿಸಿಟಿವಿ ವಿಡಿಯೋ ಸಾಕ್ಷಿ ನೀಡಿದ್ದಾರೆ. ಹೀಗಾಗಿ ತನಿಖಾ ಸಮಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲಿದ್ದಾರೆ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ವಲಯದಲ್ಲಿ ಸೆರೆ ಹಿಡಿದ ಚಿರತೆಯನ್ನು ಕಡೂರು ತಾಲೂಕು ಮದಗದ ಕೆರೆ ಬಳಿ ತಂದು ಬಿಟ್ಟಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ನಮ್ಮ ವ್ಯಾಪ್ತಿಯಲ್ಲಿ ಬೇರೆ ಕಡೆಯಿಂದ ಚಿರತೆ ತಂದು ಬಿಡಲು ಅನುಮತಿ ಪಡೆಯಬೇಕು. ಆದರೆ ನಮ್ಮಿಂದ ಅನುಮತಿ ಪಡೆದಿಲ್ಲ. ಚಿರತೆ ತಂದು ಬಿಟ್ಟಿರುವ ಆರೋಪವನ್ನು ಅಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ. ತನಿಖೆ ಬಳಿಕ ವಾಸ್ತವ ಬೆಳಕಿಗೆ ಬರಲಿದೆ.| ರಮೇಶ್ಬಾಬು ಡಿಎಫ್ಒ ಚಿಕ್ಕಮಗಳೂರುಚಿರತೆಯನ್ನು ತುರುವೇಕೆರೆಯಿಂದ ಕಡೂರಿನ ಎಮ್ಮೆದೊಡ್ಡಿ ಪ್ರದೇಶಕ್ಕೆ ಅನುಮತಿ ಪಡೆಯದೆ ಸಾಗಣೆ ಮಾಡಿದ ವಾಹನದ ಮಾಲೀಕ ಹಾಗೂ ಚಾಲಕನ ವಿರುದ್ಧ ಪ್ರಕರಣ ದಾಖಲು ಮಾಡಿ ವಾಹನ ವಶಪಡಿಸಿಕೊಳ್ಳಬೇಕು. ಚಿರತೆ ಪದೇಪದೆ ಜನರ ಮೇಲೆ ದಾಳಿ ಮಾಡಿದ್ದರಿಂದ ಅದನ್ನು ಸೆರೆ ಹಿಡಿಯಲಾಗಿತ್ತು ಎನ್ನಲಾಗುತ್ತಿದೆ. ಆದರೆ ಆ ಚಿರತೆಯನ್ನು ಮದಗದ ಕೆರೆ ಬಳಿ ತಂದು ಬಿಟ್ಟಿರುವುದು ತಪ್ಪು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಅರಣ್ಯ ಸಚಿವರು ಕಠಿಣ ಕ್ರಮ ಕೈಗೊಳ್ಳಬೇಕು.|ಜಿ.ವೀರೇಶ್ ಗೌರವ ವನ್ಯಜಿವಿ ಪರಿಪಾಲಕ