ಜಿಲ್ಲೆ

ಕಡಿಮೆಯಾಗಿದೆ ಓದುವ ಹವ್ಯಾಸ

ಮೈಸೂರು: ಪ್ರಸ್ತುತ ಸಾಹಿತ್ಯ ಕೃತಿಗಳನ್ನು ಓದುವ ಹವ್ಯಾಸ ಕಡಿಮೆಯಾಗಿದೆ ಎಂದು ಸಂತ ಫಿಲೋಮಿನಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ವಿ.ಶ್ರೀಧರಮೂರ್ತಿ ಕಳವಳ ವ್ಯಕ್ತಪಡಿಸಿದರು.

ಶ್ರೀ ನಟರಾಜ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಕಲಾಕೂಟ, ಅನನ್ಯ ಪುಸ್ತಕ ಸಂಸ್ಥೆ ಸಹಯೋಗದಲ್ಲಿ ಹೊಸಮಠದ ಶ್ರೀ ನಟರಾಜ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಿ.ಚಾಮಶೆಟ್ಟಿ ರಚಿಸಿರುವ ‘ಚತುರ್ವಿಧ ನಾಟಕಗಳು’, ‘ನೇಗಿಲಯೋಗಿ ಮತ್ತು ಇತರ ನಾಟಕಗಳು’, ‘ಕ್ರೀಡಾ ಕಾವ್ಯಲಹರಿ’ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈಗಿನ ಜನರ ಅಭಿರುಚಿ ಪರಿವರ್ತನೆಯಾಗಿದೆ. ಓದುವ ಪ್ರಕೃತಿ ಕಡಿಮೆಯಾಗಿ, ಮೊಬೈಲ್ ಕಡೆಗೆ ಒಲವು ಹೆಚ್ಚಾಗಿದೆ. ಇದರಿಂದಾಗಿ ಓದುಗರ ಸಂಖ್ಯೆ ಕ್ಷೀಣಿಸಿದೆ. ಆದ್ದರಿಂದ ಕಾಲಕ್ಕೆ ತಕ್ಕಂತೆ, ಓದುಗ ಅಭಿರುಚಿಗೆ ಅನುಗುಣವಾಗಿ ಕೃತಿಗಳು ರಚಿಸಬೇಕಾಗಿದೆ ಎಂದರು.

ಜನರು ಕೃತಿಗಳನ್ನು ಓದುತ್ತಿಲ್ಲ. ನಾಟಕ ವೀಕ್ಷಣೆಗೂ ಬರುತ್ತಿಲ್ಲ ಎಂಬ ಕಾರಣಕ್ಕೆ ಅಕ್ಷರ ಕೃಷಿಯನ್ನು ನಿಲ್ಲಿಸಿದರೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕುಂಠಿತವಾಗಲಿದೆ ಎಂದರು.

‘ಪುಸ್ತಕಗಳು ಸದಾ ಕಾಲಕ್ಕೂ ನಿಜವಾದ ಮಿತ್ರ’ ಎಂಬ ಮಹಾತ್ಮ ಗಾಂಧೀಜಿ ಮಾತು ಅಕ್ಷರಶಃ ಸತ್ಯ. ಉತ್ತಮ ವಿಚಾರವನ್ನು ಒಳಗೊಂಡ ಪುಸ್ತಕವನ್ನು ಪ್ರಕಟಿಸಿದರೆ ಜನರು ಓದುತ್ತಾರೆ. ಸಾಹಿತ್ಯ ಆಸಕ್ತರು ಈಗಲೂ ಸಕ್ರಿಯವಾಗಿದ್ದಾರೆ. ಬರಹಗಾರರು ಆಶಾವಾದಿಗಳು ಆಗಬೇಕು ಎಂದರು.

ಕೃತಿಗಳ ಕುರಿತು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಮಾತನಾಡಿದರು.

ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಕವಯತ್ರಿ ಕೆರೋಡಿ ಲೋಲಾಕ್ಷಿ, ಲೇಖಕ ಸಿ.ಚಾಮಶೆಟ್ಟಿ, ಪ್ರಕಾಶಕ ಡಿ.ಎನ್.ಲೋಕಪ್ಪ ಇನ್ನಿತರರಿದ್ದರು