ಜಿಲ್ಲೆ

ಕಡಿಮೆ ಬೆಲೆಗೆ ಫಿಶ್ ಫುಡ್ ನೀಡುವುದಾಗಿ ಆನ್‌ಲೈನ್‌ನಲ್ಲಿ 73 ಸಾವಿರ ಮೋಸ

ಬೇಲೂರು : ಕಡಿಮೆ ಬೆಲೆಗೆ ಮೀನು ಆಹಾರ (ಫಿಶ್ ಫುಡ್) ನೀಡುವುದಾಗಿ ಆನ್‌ಲೈನ್‌ನಲ್ಲಿ 73 ಸಾವಿರ ರೂ. ಹಾಕಿಸಿಕೊಂಡು ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ತಾಲ್ಲೂಕಿನ ಅರೇಹಳ್ಳಿ ಗ್ರಾಮದ ಅಮಿತ್‌ಶೆಟ್ಟಿ ಮತ್ತು ರಂಜನ್ ಅವರು ಡಣಾಯಕನಹಳ್ಳಿಯಲ್ಲಿ ಮೀನು ಕೃಷಿ ಮಾಡುತ್ತಿದ್ದು, ಮಂಡ್ಯ ಜಿಲ್ಲೆಯ ಮಳವಳ್ಳಿಯ ನಿರಂಜನ್ ಎಂಬುವರಿಂದ ಮೀನು ಆಹಾರ ತರಿಸುತ್ತಿದ್ದರು. ಆ ಬಳಿಕ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿದಾಗ ಕಡಿಮೆ ಬೆಲೆಗೆ ಮೀನು ಆಹಾರ ದೊರೆಯುವ ಮಾಹಿತಿ ಸಿಕ್ಕಿದೆ. ವೆಬ್‌ಸೈಟ್‌ನಲ್ಲಿ ಸಿಕ್ಕ 9007494883ಗೆ ಕರೆ ಮಾಡಿದಾಗ ಅಪರಿಚಿತ ವ್ಯಕ್ತಿ ರಾಹುಲ್ ವರ್ಮ ಎಂದು ಪರಿಚಯ ಮಾಡಿಕೊಂಡು ಕಡಿಮೆ ಬೆಲೆಗೆ ಪದಾರ್ಥ ನೀಡುವುದಾಗಿ ಹೇಳಿದ್ದಾನೆ. ಆತನ ಬಗ್ಗೆ ಪೂರ್ವಾಪರ ವಿಚಾರಿಸದೆ ಬ್ಯಾಂಕ್ ಖಾತೆಗೆ 73 ಸಾವಿರ ರೂ. ಸಂದಾಯ ಮಾಡಿದ್ದಾರೆ. ಕೆಲ ದಿನಗಳಾದರೂ ಮೀನು ಆಹಾರ ಬಾರದೆ ಇದ್ದಾಗ ವಿಚಾರಿಸಿದ್ದು, ಮತ್ತೆ 59 ಸಾವಿರ ರೂ. ಕಳುಹಿಸುವಂತೆ ಕೋರಿದ್ದಾನೆ. ಆಗ ಎಚ್ಚೆತ್ತುಕೊಂಡ ಅಮಿತ್ ಶೆಟ್ಟಿ ಅವರು ಬ್ಯಾಂಕ್ ಖಾತೆ ವಿವರ ಪರಿಶೀಲಿಸಿದಾಗ ಅಬ್ದುಲ್ ಎಂಬಾತನಿಗೆ ಹಣ ಸಂದಾಯವಾಗಿರುವುದು ತಿಳಿದಿದೆ. ತಾವು ಮೋಸ ಹೋಗಿರುವುದನ್ನು ಹಣ ಹಾಕಿದ ಬಳಿಕ ಅರಿತಿರುವ ಅವರು ಹಾಸನದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.