ಜಿಲ್ಲೆ

ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಬರುವ ಬೆಳೆ ಬೆಳೆಯಿರಿ

ಮೈಸೂರು: ಕೃಷಿ, ತೋಟಗಾರಿಕೆ ಕೃಷಿಯಲ್ಲಿ ಆಧುನಿಕ ಪದ್ಧತಿ ಅನುಸರಿಸಿ ಆದಾಯ ಕಂಡುಕೊಳ್ಳಬೇಕು. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಬರುವಂತಹ ಬೆಳೆ ಬೆಳೆಯುವ ಕಡೆಗೆ ರೈತರು ಮುಂದಾಗಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ಸಹಯೋಗದೊಂದಿಗೆ ಮೈಸೂರು ತಾಲೂಕಿನ ತೋಟಗಾರಿಕೆ ಮಹಾವಿದ್ಯಾಲಯದ ಆವರಣದಲ್ಲಿ ಸೋಮವಾರ ರೈತರಿಗೆ ಏರ್ಪಡಿಸಿದ್ದ ತೋಟಗಾರಿಕೆ ಆಧಾರಿತ ಕೃಷಿ ಪದ್ಧತಿಯ ತರಬೇತಿ ಹಾಗೂ ಪರಿಕರಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದೀಗ ಬೇಸಾಯ ತುಂಬ ಕಷ್ಟವಾಗಿದೆ. ಏನೇ ಕಷ್ಟವಾದರೂ ಭೂಮಿ ತಾಯಿ ನಂಬಿಕೊಂಡು ಕಷ್ಟಪಟ್ಟು ಬಿತ್ತನೆ ಮಾಡಲಾಗುತ್ತಿದೆ. ಆದರೆ, ತೋಟಗಾರಿಕೆ ಬೆಳೆಯಲ್ಲಿ ಈ ರೀತಿಯಾಗಲ್ಲ. ತೋಟಗಾರಿಕೆ ಬೆಳೆ ಅನುಸರಿಸಿದರೆ ಶಾಶ್ವತವಾಗಿ ಉಳಿದು ಮೊಮ್ಮಕ್ಕಳ ಕಾಲದ ತನಕವೂ ಉಳಿಸಬಹುದು. ದಾಳಿಂಬೆ, ಸಪೋಟ, ಪಪ್ಪಾಯಿ ಬೆಳೆ ಸುಲಭವಾಗಿ ಬೆಳೆಯಬಹುದು. ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯವೂ ಬರಲಿದೆ ಎಂದರು.

ಹೊಗೆಸೊಪ್ಪು ಬೆಳೆಯುವ ಜತೆಗೆ ತರಕಾರಿ, ಹೂವು ಬೆಳೆದರೆ ಖರ್ಚಿಗೆ ದುಡ್ಡು ಬರಲಿದೆ. ಎರಡು ಎಕರೆಯಲ್ಲಿ ಒಂದು ಎಕರೆಯನ್ನು ಸಮಗ್ರ ಕೃಷಿ ಪದ್ಧತಿಗೆ ಅನುಸರಿಸಬೇಕು. ತರಕಾರಿ, ಹಣ್ಣುಗಳ ದರ ಹೆಚ್ಚಾಗಿರುವ ಕಾರಣ ಆದಾಯ ಮಾತ್ರ ತಪ್ಪುವುದಿಲ್ಲ. ತೋಟಗಾರಿಕೆ ಕೃಷಿ ಮಾಡಲು ಹೆಚ್ಚು ನೀರು ಬೇಕಿಲ್ಲ. ಹನಿ ನೀರಾವರಿ ಬಳಸಬಹುದು. ಸರ್ಕಾರದಿಂದಲೂ ಹನಿ, ತುಂತುರು ನೀರಾವರಿಗೆ ಸಬ್ಸಿಡಿ ಕೊಡುವುದರಿಂದ ರೈತರು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರೈತರು ಯಾವ ಕಾಲಕ್ಕೆ ಯಾವ ಬೆಳೆಗಳನ್ನು ಹಾಕಬೇಕು. ಯಾವ್ಯಾವ ಸಮಯದಲ್ಲಿ ಬೆಲೆಗಳು ಹೆಚ್ಚಾಗುತ್ತವೆ ಎಂಬುದನ್ನು ನೋಡಿ ಬೆಳೆ ಹಾಕಬೇಕು. ತರಕಾರಿ ಪದಾರ್ಥಗಳಿಗೆ ನಿತ್ಯ ಬೆಲೆ ಇದೆ. ಟೊಮ್ಯಾಟೊ, ಹೂಕೋಸು, ಸೊಪ್ಪಿಗೆ ಬೆಲೆ ಇದ್ದೇ ಇರುತ್ತದೆ. ಇಂತಹವುಗಳನ್ನು ಬೆಳೆಯಬೇಕು ಎಂದು ಹೇಳಿದರು.

ರೈತರು ಕೃಷಿ ಭೂಮಿಯನ್ನು ಮಾರಾಟ ಮಾಡುತ್ತಿದ್ದಾರೆ. ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಲು ಯೋಚಿಸುತ್ತಿಲ್ಲ. ಜಮೀನಿನ ಬೆಲೆ ಕೋಟಿ ರೂ. ದಾಟಿದೆ ಎಂದು ಖರೀದಿದಾರರು ಬಂದಾಕ್ಷಣ ಮಾರಿ ಮದುವೆ ಮಾಡುತ್ತಾರೆ.

ಕೆಲವರು ಸಾಲ ಮಾಡಿ, ಮದುವೆ ಮಾಡಿ ಜಮೀನು ಮಾರಿ ಸಾಲ ತೀರಿಸುತ್ತಾರೆ. ಅದರ ಬದಲಿಗೆ ಸರಳ ವಿವಾಹ ಮಾಡಿ ಜಮೀನು ಉಳಿಸಿಕೊಳ್ಳಬೇಕು ಎಂದು ರೈತರಿಗೆ ಮನವಿ ಮಾಡಿದರು.

ದುಡಿಯುವ ಸಮಯದಲ್ಲಿ ಸುಮ್ಮನಾಗುತ್ತಾರೆ. ಪದವಿ ಮಾಡಿದವರಿಗೆ ಉದ್ಯೋಗ ಸಿಗದೆ 8 ರಿಂದ 12 ಸಾವಿರ ರೂ. ವೇತನಕ್ಕೆ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಾರೆ. ಊರಲ್ಲಿ ಇರುವ ಜಮೀನಿನಲ್ಲಿ ಕೃಷಿ ಮಾಡಲಾಗದೆ ನನ್ನ ಮಗನಿಗೆ ಹತ್ತು ಸಾವಿರ ರೂ. ಸಂಬಳ ಇದ್ದರೂ ಸರಿ, ಕೆಲಸ ಕೊಡಿಸುವಂತೆ ಅರ್ಜಿ ಹಿಡಿದುಕೊಂಡು ಬರುತ್ತಾರೆ. ಕೆಲವು ಕಡೆಗಳಲ್ಲಿ ಕಾಯಂ ಮಾಡಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ಏಜೆನ್ಸಿಗಳ ಮೂಲಕ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಕೋಲಾರದಲ್ಲಿ ಒಂದು ಎಕರೆಯಲ್ಲಿ ಮಾವಿನ ಹಣ್ಣು ಬೆಳೆದು ಐದು ಲಕ್ಷ ರೂ. ಸಂಪಾದನೆ ಮಾಡುತ್ತಾರೆ. ಮಾವು ಬೆಳೆದು ಅವರೇ ಮಾಗಿಸುತ್ತಾರೆ. ಅವರೇ ಲೋಡ್ ಮಾಡಿ ಸಾಗಿಸುತ್ತಾರೆ. ಅದೇ ರೀತಿ ನಾವು ಮಾಡಬೇಕು ಎಂದರು.

ಕೃಷಿಯಲ್ಲಿ ಹೊಸ ಹೊಸ ವಿಧಾನಗಳು ಬರುತ್ತಿವೆ. ಕೃಷಿ ಚಟುವಟಿಕೆಗೆ ಸಾಕಷ್ಟು ಕೃಷಿ ಕಾರ್ಮಿಕರು ಸಿಗುತ್ತಿಲ್ಲ. ಹೀಗಾಗಿ, ಆಧುನಿಕ ಕೃಷಿಯನ್ನು ತಿಳಿದು ಅಳವಡಿಸಿಕೊಂಡು ತೋಟಗಾರಿಕೆಯಲ್ಲಿ ಸಂಪಾದನೆ ಮಾಡಬೇಕು. ಅದರಿಂದ ಬರುವ ಆದಾಯ ಹೆಚ್ಚಳ ಮಾಡಿಕೊಳ್ಳಬೇಕು. ರೈತರು ಕಷ್ಟಪಟ್ಟು ದುಡಿಯಬೇಕು. ದುಡಿದರೆ ರೈತ ನೆಮ್ಮದಿಯಾಗಿ ಇರುತ್ತಾನೆ. ಶ್ರೀಮಂತರು ನೆಮ್ಮದಿಯಿಂದ ಇರಲ್ಲ. ಬಡವರು ನೆಮ್ಮದಿಯಿಂದ ಜೀವನ ಮಾಡುತ್ತಾರೆ ಎಂಬುದನ್ನು ಗಮನಿಸಬೇಕು ಎಂದರು.

ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಜನಾರ್ದನ್, ಗುಂಗ್ರಾಲ್ ಛತ್ರದ ಗ್ರಾಪಂ ಅಧ್ಯಕ್ಷೆ ಮಂಜುಳಾ, ಗೇರು ಸಂಶೋಧನಾ ಸಂಸ್ಥೆ ವಿಜ್ಞಾನಿ ಡಾ.ಸಿ.ಎನ್.ಮಂಜೇಶ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಡಾ.ನಾಗರಾಜು, ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಆರ್.ಸಿದ್ದಪ್ಪ, ಡಾ.ಕೆ.ಸಿ.ಕಿರಣಕುಮಾರ್,ಕೆ.ಎಂ.ಶಿವಕುಮಾರ್,ಡಾ.ಮನುಕುಮಾರ್ ಭಾಗವಹಿಸಿದ್ದರು.

ಹುಣಸೂರಿನ ಕ್ಷೇತ್ರದ ಜನರು ಕೈ ಹಿಡಿದಿದ್ದರಿಂದ ಈ ಮಟ್ಟಕ್ಕೆ ಬಂದಿದ್ದೇನೆ. ಎರಡು ಬಾರಿ ಸೋತಿದ್ದೇನೆ. ಲೋಕಸಭೆಯಲ್ಲಿ ಸೋತಿದ್ದೇನೆ. ಒಮ್ಮೆ ಬಿಜೆಪಿಗೆ ಹೋಗಿದ್ದರಿಂದ ಜನರು ಸೋಲಿಸಿದರು. ಅಂದು ಏನಾದರೂ ಗೆಲ್ಲಿಸಿದ್ದರೆ ಉಪ ಮುಖ್ಯಮಂತ್ರಿಯಾಗಿ ಬಿಡುತ್ತಿದ್ದೆ. ಹುಣಸೂರು ಜನರು ಎಂದರೆ ಎಲ್ಲಿಲ್ಲದ ಪ್ರೀತಿ. ನಾನು ಹುಣಸೂರು ಬಿಟ್ಟು ಬಂದರೂ ಒಂದು ಕಣ್ಣು ಇರುತ್ತದೆ. ನನ್ನ ಪತ್ನಿಯನ್ನು ಜಿಪಂಗೆ ಕಳುಹಿಸಿದ್ದರು. ಈಗ ಮಗನನ್ನು ಗೆಲ್ಲಿಸಿದ್ದಾರೆ.

ಜಿ.ಟಿ.ದೇವೇಗೌಡ, ಶಾಸಕ