ಲಕ್ಷ್ಮೇಶ್ವರ: ಮುಂಗಾರಿನ ಹತ್ತಿ, ಶೇಂಗಾ, ತೊಗರಿ ಸೇರಿ ಪ್ರಮುಖ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ಘೊಷಿಸಿದಂತೆ ಹಿಂಗಾರಿನ ಪ್ರಮುಖ ಬೆಳೆಯಾದ ಕಡಲೆಗೂ ಬೆಂಬಲ ಬೆಲೆ ಘೊಷಿಸಿ ಖರೀದಿ ಕೇಂದ್ರ ಆರಂಭಿಸಲು ಮುಂದಾಗಿರುವುದು ರೈತರಲ್ಲಿ ಹರ್ಷ ಉಂಟು ಮಾಡಿದೆ.
ಮುಕ್ತ ಮಾರುಕಟ್ಟೆಯಲ್ಲಿ ಕಡಲೆ ಬೆಲೆ ಕುಸಿತ ವಾಗಿದ್ದರಿಂದ ರೈತರು ಕಡಲೆಯನ್ನು ಸಕಾಲಿಕವಾಗಿ ಬೆಂಬಲ ಬೆಲೆಯಲ್ಲಿ ಖರೀದಿಸಬೇಕೆಂದು ಬೀದಿಗಿಳಿದು ಹೋರಾಟ ಮಾಡಿದ್ದರು. ಎಚ್ಚೆತ್ತುಕೊಂಡ ಸರ್ಕಾರ ಗುರುವಾರ ಸಚಿವ ಸಂಪುಟದ ಸಭೆಯಲ್ಲಿ ಪ್ರತಿ ಕ್ವಿಂಟಾಲ್ ಕಡಲೆಗೆ 4875 ರೂ.ಗಳಂತೆ ಮಾರಾಟ ಮಹಾಮಂಡಳದ ಮೂಲಕ ಖರೀದಿಸುವಂತೆ ಆದೇಶ ಮಾಡಿದೆ.
ಈ ಕುರಿತು ಗದಗ ಜಿಲ್ಲಾ ಮಾರಾಟ ಮಾಹಾ ಮಂಡಳದ ವ್ಯವಸ್ಥಾಪಕ ಡಿ.ಬಿ.ಡೊಕ್ಕಣ್ಣವರ ಅವರನ್ನು ಸಂರ್ಪಸಿದಾಗ, ಸರ್ಕಾರದ ಆದೇಶದಂತೆ ಪ್ರತಿ ಎಕರೆಗೆ 3 ಕ್ವಿಂಟಾಲ್ ಮತ್ತು ಪ್ರತಿ ರೈತರಿಂದ 10 ಕ್ವಿಂಟಾಲ್ ಕಡಲೆಯನ್ನು 4,875 ರೂ. ಗಳಂತೆ ಖರೀದಿ ಮಾಡಲು ಸೂಚಿಸಿದೆ. ಲಕ್ಷ್ಮೇಶ್ವರ/ಶಿರಹಟ್ಟಿ ತಾಲೂಕು ವ್ಯಾಪ್ತಿಯ ಅಡರಕಟ್ಟಿ, ಶಿಗ್ಲಿ, ಯಳವತ್ತಿ, ಶಿರಹಟ್ಟಿಯ ವ್ಯವಸಾಯ ಸೇವಾ ಸಹಕಾರ ಸಂಘದ ಮೂಲಕ ಖರೀದಿಸಲಾಗುವುದು ಎಂದು ತಿಳಿಸಿದರು. ಈ ಕುರಿತು ಕಡಲೆಗೆ ಬೇಕು ಬೆಂಬಲ ಬೆಲೆ ಎಂಬುದರ ಕುರಿತು ಫೆ.11 ರಂದು ‘ವಿಜಯವಾಣಿ’ಯಲ್ಲಿ ವಿಸõತ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಹುದು.
ಕಡಲೆ ಮಾರಾಟಕ್ಕೂ ಕಾಡಲಿದೆ ಬೆಳೆ ದೃಢೀಕರಣ?: ಮುಂಗಾರು ಹಂಗಾಮಿನಲ್ಲಿ ರೈತರು ಶೇಂಗಾ, ಹತ್ತಿ ಬೆಳೆದಿದ್ದರೂ ಕಂದಾಯ ಇಲಾಖೆಯ ಸಿಬ್ಬಂದಿ ಎಡವಟ್ಟಿನಿಂದ ಉತಾರದಲ್ಲಿ ರೈತ ಬೆಳೆದ ಬೆಳೆ ನಮೂದಾಗದೆ ಶೇಂಗಾ, ಹತ್ತಿಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಹೆಣಗಾಡುತ್ತಿದ್ದಾರೆ. ಅದಕ್ಕಾಗಿ ಕಂದಾಯ ಇಲಾಖೆಯಿಂದ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಬೆಳೆ ದೃಢೀಕರಣ ಪಡೆಯುತ್ತಿದ್ದಾರೆ.
ಆದರೆ, ಮುಂಗಾರಿನಲ್ಲಿ ಶೇಂಗಾ, ಉಳ್ಳಾಗಡ್ಡಿ, ಬೆಳ್ಳುಳ್ಳಿ ಸೇರಿ ಇತರೆ ಬೆಳೆ ಬೆಳೆದ ರೈತರು ಹಿಂಗಾರಿನಲ್ಲಿ ಇದೇ ಜಮೀನಿನಲ್ಲಿ ಕಡಲೆ, ಜೋಳ ಬೆಳೆದಿದ್ದಾರೆ. ಈಗ ಉತಾರದಲ್ಲಿ ಮುಂಗಾರಿನ ಬೆಳೆಗಳೇ ಇರುವುದರಿಂದ ರೈತರು ಕಡಲೆ ಮಾರಾಟ ಮಾಡಲು ಬೇಕಾದ ಕಡಲೆ ಬೆಳೆದ ಉತಾರ ಪಡೆಯವುದು ಅಸಾಧ್ಯವಾಗಿದೆ. ಇದರಿಂದ ಸರ್ಕಾರ ಒಂದು ಕಡೆ ಬೆಂಬಲ ಬೆಲೆ ಘೊಷಿಸಿರುವುದು ಸಂತಸ ತಂದಿದ್ದರೆ ಉತಾರ, ಬೆಳೆ ದೃಢೀಕರಣಕ್ಕಾಗಿ ಪರದಾಡಬೇಕಿದೆ.
ಕಡಲೆ ಖರೀದಿ ಪ್ರಕ್ರಿಯೆ ಪ್ರಾರಂಭಗೊಳ್ಳುವ ಮೊದಲೇ ಸಂಬಂಧಪಟ್ಟ ಕಂದಾಯ ಮತ್ತು ಕೃಷಿ ಇಲಾಖೆಯವರು ರೈತರಿಗೆ ಉತಾರ ಮತ್ತು ದೃಢೀಕರಣ ಪತ್ರ ನೀಡುವ ವ್ಯವಸ್ಥೆಯನ್ನು ಸರಳೀಕರಣಗೊಳಿಸಬೇಕು. ಸಾಧ್ಯವಾದರೆ ಖರೀದಿ ಕೇಂದ್ರದಲ್ಲಿ ಈ ವ್ಯವಸ್ಥೆ ಕಲ್ಪಿಸಬೇಕು ಎಂದು ಕಡಲೆ ಬೆಳೆಗಾರ ಬಸವರಾಜ ಅಣ್ಣಿಗೇರಿ, ವಿರೂಪಾಕ್ಷ ಆದಿ, ಶಿವಾನಂದ ಲಿಂಗಶೆಟ್ಟಿ ಆಗ್ರಹಿಸಿದ್ದಾರೆ.
ಈಗಾಗಲೇ ಹಿಂಗಾರಿನ ಬೆಳೆಗಳ ಸಮೀಕ್ಷೆ ಕಾರ್ಯ ಮುಗಿದಿದ್ದು, ನಿಗದಿತ ತಂತ್ರಾಂಶದಲ್ಲಿ ಹಿಂಗಾರಿನ ಬೆಳೆ ನಮೂದಾಗಲಿದೆ. ಈ ಬಗ್ಗೆ ಬೆಳೆ ಸಮೀಕ್ಷೆ ಮತ್ತು ಅಪ್ಲೋಡ್ ಮಾಡುವ ಕಾರ್ಯ ಕೂಡಲೆ ಪೂರ್ಣಗೊಳಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ.| ಭ್ರಮರಾಂಬ ಗುಬ್ಬಿಶೆಟ್ಟಿ ತಹಸೀಲ್ದಾರ್