ಜಿಲ್ಲೆ

ಕಡಲೆಕಾಯಿ ಬೆಳೆಗಾರರ ದಾಂಧಲೆ

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಸಂತೆಯಲ್ಲಿ ಇ-ಟೆಂಡರ್ ಮೂಲಕ ಕಡಲೆಕಾಯಿ ಖರೀದಿಗೆ ಯಾವುದೇ ವ್ಯಾಪಾರಿಗಳೂ ಮುಂದಾಗದಿದ್ದರಿಂದ ರೊಚ್ಚಿಗೆದ್ದ ಬೆಳೆಗಾರರು ದಾಂಧಲೆ ನಡೆಸಿ ಪೀಠೋಪಕರಣಗಳನ್ನು ಹೊರಗೆಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಪ್ರತಿ ಗುರುವಾರ ತೆರಕಣಾಂಬಿ ಎಪಿಎಂಸಿ ಆವರಣದಲ್ಲಿ ದೊಡ್ಡ ಸಂತೆ ನಡೆಯುತ್ತಿದ್ದು, ಸುತ್ತಲಿನ ಗ್ರಾಮಗಳ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಹಿಂದೆ ನಡೆಯುತ್ತಿದ್ದ ವ್ಯಾಪಾರದಲ್ಲಿ ತೂಕ ಮತ್ತು ಬೆಲೆಯಲ್ಲಿನ ಮೋಸದಿಂದ ರೈತರು ನಷ್ಟಕ್ಕೀಡಾಗುತ್ತಿದ್ದ ಹಿನ್ನೆಲೆಯಲ್ಲಿ ಎಪಿಎಂಸಿ ಆಡಳಿತ ಮಂಡಳಿ ಕಳೆದ ಜನವರಿಯಿಂದ ಇ-ಟೆಂಡರ್ ಮೂಲಕ ಖರೀದಿಸುವಂತೆ ಮಾಡಿತ್ತು. ಎಪಿಎಂಸಿಯಲ್ಲಿ ಪರವಾನಗಿ ಪಡೆದ ವ್ಯಾಪಾರಿಗಳು ಉತ್ಪನ್ನಗಳ ಗುಣಮಟ್ಟದ ಮೇಲೆ ಬೆಲೆ ನಿಗದಿ ಮಾಡುತ್ತಿದ್ದುದರಿಂದ ಮೋಸ ಮತ್ತು ವಂಚನೆಗಳಿಗೆ ಅವಕಾಶವಿಲ್ಲದಂತಾಗಿದ್ದು, ಬೆಳೆಗಾರರಿಗೂ ಉತ್ತಮ ಬೆಲೆ ಸಿಗುತ್ತಿತ್ತು. ಕಳೆದ 10 ತಿಂಗಳಿನಿಂದ ಟೆಂಡರ್ ವ್ಯವಸ್ಥೆ ಸುಗಮವಾಗಿ ನಡೆಯುತ್ತಾ ಬಂದಿದ್ದರಿಂದ ಯಾವುದೇ ವಹಿವಾಟು ನಡೆಸಲು ಸಾಧ್ಯವಾಗದ ಸಣ್ಣ ವ್ಯಾಪಾರಿಗಳು ಇದನ್ನು ನಿಲ್ಲಿಸಲು ಪ್ರಯತ್ನ ನಡೆಸುತ್ತಲೇ ಬಂದಿದ್ದರು.


ಈ ಬಾರಿ ಮಳೆ ಕಡಿಮೆಯಾಗಿದ್ದರಿಂದ ಸಂತೆಗೆ ಮಾರಾಟಕ್ಕೆ ಬರುವ ಕೃಷಿ ಉತ್ಪನ್ನಗಳೂ ಕಡಿಮೆಯಾಗಿದ್ದರಿಂದ ಉತ್ತಮ ಬೆಲೆ ಸಿಗುತ್ತಿದ್ದು ರೈತರು ಸಮಾಧಾನದಿಂದಲೇ ವ್ಯವಹರಿಸುತ್ತಿದ್ದರು.


ಆದರೆ ಈ ಬಾರಿ ಕಡಲೆಕಾಯಿ ಖರೀದಿ ಇ-ಟೆಂಡರ್ ಆರಂಭಿಸುವ ಮೊದಲೇ ಕೆಲವು ಚಿಲ್ಲರೆ ಹಾಗೂ ಬೀದಿ ಬದಿಯಲ್ಲಿ ಮಾರಾಟ ಮಾಡುವವರು ಸಹೆಚ್ಚಿನ ಬೆಲೆ ಕೊಟ್ಟು ಸ್ವಲ್ಪ ಪ್ರಮಾಣದಲ್ಲಿ ಮಾಲು ಖರೀದಿಸುತ್ತಿದ್ದರು. ಆದರೆ ಟೆಂಡರ್‌ನಲ್ಲಿ ಇದಕ್ಕಿಂತ 100-200 ರೂ. ಕಡಿಮೆ ನಿಗದಿಯಾಗುತ್ತಿತ್ತು. ಹಾಗಾಗಿ, ಸ್ವಲ್ಪ ಹೆಚ್ಚುವರಿ ಹಣ ಕೊಡುವಂತೆ ಒತ್ತಾಯಿಸಿ ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದರು. ಇ-ಟೆಂಡರ್ ಮೂಲಕ ಖರೀದಿ ನಡೆದ ನಂತರವೂ ಹೆಚ್ಚುವರಿ ಹಣಕ್ಕೆ ಒತ್ತಾಯಿಸುತ್ತಿದ್ದ ಕಡಲೆಕಾಯಿ ಬೆಳೆಗಾರರ ನಡೆಯಿಂದ ಬೇಸತ್ತ ವ್ಯಾಪಾರಿಗಳು ಸಂತೆಯಲ್ಲಿ ಟೆಂಡರ್ ಹಾಕಲು ಮುಂದಾಗಲಿಲ್ಲ.


ಬೆಳಗ್ಗೆಯಿಂದ ಕಾದು ಕಾದು ಬೇಸತ್ತ ಬೆಳೆಗಾರರು ಇ-ಟೆಂಡರ್ ಆರಂಭಿಸುವಂತೆ ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕಿ, ಕಚೇರಿಯಲ್ಲಿದ್ದ ಅಧಿಕಾರಿ ಎ.ಎಲ್.ಮಹೇಶ್ ಅವರನ್ನು ಒತ್ತಾಯಿಸಿದರು. ಆದರೆ ಯಾವುದೇ ವ್ಯಾಪಾರಿಯೂ ಖರೀದಿಗೆ ಮುಂದಾಗಲಿಲ್ಲ. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ರೈತರು ಕಚೇರಿಯಲ್ಲಿದ್ದ ಪೀಠೋಪಕರಣಗಳನ್ನು ಹೊರಗೆಸೆದು, ಗೇಟ್‌ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.


ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ಕೈಮೀರದಂತೆ ನಿಯಂತ್ರಿಸಿದರು. ಎಪಿಎಂಸಿ ಅಧಿಕಾರಿಗಳ ಕೋರಿಕೆ ಮೇರೆಗೆ ಒಬ್ಬರೆ ವ್ಯಾಪಾರಿ ಸಂತೆಗೆ ಬಂದಿದ್ದ 250 ಚೀಲ ಕಡಲೆಕಾಯಿಯನ್ನು 3 ರಿಂದ 4 ಸಾವಿರ ರೂ.ಗೆ ಖರೀದಿಸಿದರು.


ಪ್ರತಿ ಸಂತೆಯಲ್ಲಿಯೂ ಹೀಗೆ ಗಲಾಟೆ ನಡೆಸಿದರೆ ಕಡಲೆಕಾಯಿಯನ್ನು ಇ-ಟೆಂಡರ್ ಪದ್ಧತಿಯಿಂದ ಹೊರಗಿಟ್ಟು ಉಳಿದ ಉತ್ಪನ್ನಗಳನ್ನು ಮಾತ್ರ ಖರೀದಿಸಬೇಕಾಗುತ್ತದೆ. ಈ ಬಗ್ಗೆ ಸಮಿತಿಯ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಎಪಿಎಂಸಿ ಕಾರ್ಯದರ್ಶಿ ಶ್ರೀಧರ್ ವಿಜಯವಾಣಿಗೆ ತಿಳಿಸಿದ್ದಾರೆ.