ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಎಪಿಎಂಸಿ ಆವರಣದ ಹುಬ್ಬಳ್ಳಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳು ಖರೀದಿ ಪ್ರಕ್ರಿಯೆ ಶುಕ್ರವಾರದಿಂದ ಆರಂಭವಾಗಿದೆ.
ಧಾರವಾಡ ಜಿಲ್ಲೆಯ ಧಾರವಾಡ, ಉಪ್ಪಿನಬೆಟಗೇರಿ, ಹುಬ್ಬಳ್ಳಿ, ನೂಲ್ವಿ, ಹೆಬಸೂರ, ಮೊರಬ, ಯರಗುಪ್ಪಿ ಸೇರಿ ಹಲವು ಕಡೆಗಳಲ್ಲಿ ಖರೀದಿ ಕೇಂದ್ರ ಆರಂಭಿಸಲಾಗಿದೆ. ಪ್ರತಿ ಕ್ವಿಂಟಾಲ್ಗೆ 4875 ರೂ.ನಂತೆ ಪ್ರತಿ ರೈತರಿಂದ ಗರಿಷ್ಠ 10 ಕ್ವಿಂಟಾಲ್ ಖರೀದಿ ಮಾಡಲಾಗುತ್ತಿದೆ.
ಈವರೆಗೆ ಧಾರವಾಡ ಜಿಲ್ಲೆಯಲ್ಲಿ 16587 ರೈತರು ಕಡಲೆಕಾಳು ಖರೀದಿ ಕೊಡಲು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಏ. 22ರ ವರೆಗೆ ನೋಂದಣಿಗೆ ಅವಕಾಶ ಇದೆ.
ಹುಬ್ಬಳ್ಳಿ ಕೇಂದ್ರವೊಂದರಲ್ಲೇ 1200ಕ್ಕೂ ಹೆಚ್ಚು ರೈತರು ನೋಂದಣಿ ಮಾಡಿಕೊಂಡಿದ್ದು, ಶುಕ್ರವಾರ ಖರೀದಿಗೆ ಕಡಲೆ ತರುವಂತೆ ಕೆಲ ರೈತರಿಗೆ ಸೂಚಿಸಲಾಗಿತ್ತು. ಅದರಂತೆ ಗ್ರೇಡರ್ ಆಗಿ ಬಂದಿದ್ದ ತೋಟಗಾರಿಕೆ ಇಲಾಖೆಯ ಅಧಿಕಾರಿ ಅನ್ನಪೂರ್ಣಾ ಅವರು ಕಡಲೆ ತೇವಾಂಶ ಪರೀಕ್ಷಿಸಿದರು.
ಸಹಕಾರಿ ಸಂಘದ ಅಧ್ಯಕ್ಷ ವಿ.ಎಸ್. ಕೆಂಚನಗೌಡ್ರ ತೂಕದ ಯಂತ್ರಕ್ಕೆ ಪೂಜೆ ಸಲ್ಲಿಸಿ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿದರು. ಉಪಾಧ್ಯಕ್ಷ ಎಂ.ಪಿ. ಸುರಣಗಿ, ಸದಸ್ಯರಾದ ಎಸ್.ಎಫ್. ಹಿರೇಮಠ, ವೈ.ಆರ್. ಮೂಲಗಿ, ಎಪಿಎಂಸಿ ಅಧ್ಯಕ್ಷ ರಾಮಚಂದ್ರ ಜಾಧವ, ಸದಸ್ಯರಾದ ಶಂಕ್ರಗೌಡ ಪಾಟೀಲ, ಸಹದೇವಪ್ಪ ಸುಡಕೇನವರ, ಬಸವರಾಜ ನಾಯ್ಕರ, ಸುರೇಶ ಕಿರೇಸೂರ, ಎಪಿಎಂಸಿ ಸಹಾಯಕ ಕಾರ್ಯದರ್ಶಿ ಜಿ.ಬಿ. ಕಬ್ಬೇರಹಳ್ಳಿ, ಸಂಘದ ಸಿಬ್ಬಂದಿ, ರೈತರು ಉಪಸ್ಥಿತರಿದ್ದರು.
ಅವಧಿ ವಿಸ್ತರಣೆ ನಂತರ ಹೆಚ್ಚು ರೈತರು ನೋಂದಣಿ: ಉತಾರ, ಬೆಳೆದರ್ಶಕ ಆಪ್ನಲ್ಲಿ ಸಮೀಕ್ಷಕರು ಕಡಲೆ ಬದಲಾಗಿ ಬೇರೆ ಬೆಳೆ ನಮೂದಿಸಿದ ಪರಿಣಾಮ ಸಾವಿರಾರು ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಕೃಷಿ ಇಲಾಖೆ, ಗ್ರಾಮ ಲೆಕ್ಕಾಧಿಕಾರಿಗಳ ಎಡವಟ್ಟಿನಿಂದಾದ ಈ ಸಮಸ್ಯೆ ನಿವಾರಣೆ ಹಾಗೂ ರೈತರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ರೈತ ನೋಂದಣಿಗೆ ಅವಧಿ ವಿಸ್ತರಣೆ ಮಾಡಿರುವುದು ವರದಾನವಾಗಿ ಪರಿಣಮಿಸಿದೆ. ಅವಧಿ ವಿಸ್ತರಣೆ ನಂತರವೇ ಧಾರವಾಡ ಜಿಲ್ಲೆಯಲ್ಲಿ ಮೂರ್ನಾಲ್ಕು ಸಾವಿರ ರೈತರ ಹೆಸರು ನೋಂದಣಿಯಾಗಿವೆ. ಬೆಳೆದರ್ಶಕದಲ್ಲಿ ಬೆಳೆ ನಮೂದು ಸರಿಯಾದ ನಂತರ ರೈತರು ಇನ್ನೂ ನೋಂದಣಿ ಮಾಡುತ್ತಲೇ ಇದ್ದಾರೆ.