ಜಿಲ್ಲೆ

ಕಡಲಿಗಿಳಿಯಲು ತಯಾರಿ

ಕಾರವಾರ: ಮಳೆಗಾಲದ ನಿರ್ಬಂಧದ ಅವಧಿ ಮುಕ್ತಾಯವಾಗುತ್ತಿದ್ದು, ಕಡಲಿಗಿಳಿಯಲು ಮೀನುಗಾರರು ಸಜ್ಜಾಗಿದ್ದಾರೆ. ಕೋವಿಡ್-19 ಪರಿಣಾಮ ಕಾರ್ವಿುಕರ ಕೊರತೆ ಹಾಗೂ ಬೆಲೆಯಲ್ಲಿ ವ್ಯತ್ಯಾಸ ಮೀನುಗಾರಿಕೆ ಮೇಲೆ ಪರಿಣಾಮ ಉಂಟುಮಾಡುವ ಆತಂಕವಿದೆ.

ಆಳ ಸಮುದ್ರದಲ್ಲಿ ಮೀನುಗಳ ಸಂತಾನಾಭಿವೃದ್ಧಿ ಕಾಲವಾಗಿರುವುದರಿಂದ ಜೂನ್ 14 ರಿಂದ ಜುಲೈ 31 ರವರೆಗೆ ಮೀನುಗಾರಿಕೆಯನ್ನು ನಿಷೇಧಿಸಲಾಗಿತ್ತು. ಆಗಸ್ಟ್ ಒಂದರಿಂದ ಮತ್ತೆ ಮೀನುಗಾರಿಕೆಗೆ ಅವಕಾಶವಿದೆ.

ಕರೊನಾ ಹರಡುವ ಆತಂಕದ ಹಿನ್ನೆಲೆಯಲ್ಲಿ ಈ ಬಾರಿ ಮೀನುಗಾರಿಕೆ ಇಲಾಖೆ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿದೆ. ಬಂದರುಗಳಲ್ಲಿ ನೋಂದಣಿಯಾದ ವ್ಯಾಪಾರಸ್ಥರು ಮಾತ್ರ ಮೀನು ಖರೀದಿಗೆ ಬರಬೇಕು. ಹೊರ ರಾಜ್ಯದಿಂದ ಬರುವ ಕಾರ್ವಿುಕರನ್ನು ಕಡ್ಡಾಯವಾಗಿ 14 ದಿನ ಕ್ವಾರಂಟೈನ್ ಮಾಡಬೇಕು. ಮಾಸ್ಕ್ ಧರಿಸುವುದು ಕಡ್ಡಾಯ ಮುಂತಾದ ಷರತ್ತುಗಳನ್ನು ದೋಣಿ ಮಾಲೀಕರಿಗೆ ವಿಧಿಸಲಾಗಿದೆ. ಕಾರ್ವಿುಕರ ಸಂಪೂರ್ಣ ಜವಾಬ್ದಾರಿಯನ್ನು ಮೀನುಗಾರರ ಸಂಘಟನೆ ಹಾಗೂ ದೋಣಿ ಮಾಲೀಕರಿಗೆ ವಹಿಸಲಾಗಿದೆ.

ಕೆಲಸಗಾರರ ಕೊರತೆ: ಜಿಲ್ಲೆಯಲ್ಲಿ ಒಟ್ಟಾರೆ ಐದು ಸಾವಿರಕ್ಕೂ ಹೆಚ್ಚು ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ ಕಾರ್ವಿುಕರು ಮೀನುಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಹೊನ್ನಾವರದ ಮೂರು ಪರ್ಸೀನ್ ಬೋಟ್ ಮಾಲೀಕರನ್ನು ಹೊರತುಪಡಿಸಿ ಉಳಿದೆಲ್ಲ ಬೋಟ್​ಗಳ ಕಾರ್ವಿುಕರು ಸ್ವಂತ ಊರುಗಳಿಗೆ ವಾಪಸಾಗಿದ್ದಾರೆ. ಈಗ ಅವರನ್ನು ವಾಪಸ್ ಕರೆಸುವುದು ಸವಾಲು.

ಕಾರವಾರದ ಬೈತಖೋಲ್ ಒಂದರಲ್ಲೇ ಶೇಕಡಾ 70 ರಷ್ಟು ಮಲ್ಟಿ ಡೇ ಟ್ರಾಲರ್ ಬೋಟ್​ಗಳು ಇದ್ದು. 2 ಸಾವಿರದಷ್ಟು ಹೊರಗಿನ ಕಾರ್ವಿುಕರು ಕೆಲಸ ಮಾಡಲು ಬರುತ್ತಿದ್ದರು. ಈ ಬಾರಿ ಅವರಿಗೆ ಬರಲು ವಾಹನ ವ್ಯವಸ್ಥೆ ಇಲ್ಲ. ಇದರಿಂದ ಪರ್ಸೀನ್ ಹಾಗೂ ಮಲ್ಟಿ ಡೇ ಟ್ರಾಲರ್ ಬೋಟ್​ಗಳಿಗೆ ಕಾರ್ವಿುಕರ ಕೊರತೆಯಾಗುವ ಆತಂಕವಿದೆ.

ಮೀನುಗಾರಿಕೆ ಸಂದರ್ಭದಲ್ಲಿ ಜನಸಂದಣಿ ಆಗದಂತೆ ತಡೆಯಲು ನೋಂದಾಯಿತರನ್ನು ಬಿಟ್ಟು ಬೇರೆಯವರು ಬಂದರಿಗೆ ಬರುವುದನ್ನು ನಿರ್ಬಂಧಿಸಲಾಗುತ್ತದೆ. ರಾಜ್ಯದ ಕಾರ್ವಿುಕರಿಗೆ ಯಾವುದೇ ನಿರ್ಬಂಧ ಇಲ್ಲ. ಹೊರ ರಾಜ್ಯದಿಂದ ಬರುವ ಕಾರ್ವಿುಕರನ್ನು ಕಡ್ಡಾಯವಾಗಿ 14 ದಿನ ಕ್ವಾರಂಟೈನ್ ಮಾಡಬೇಕಿದೆ. | ಪಿ. ನಾಗರಾಜು ಮೀನುಗಾರಿಕೆ ಉಪನಿರ್ದೇಶಕ ಬಂದರು ಪ್ರವೇಶಕ್ಕೆ ಪಾಸ್ ವ್ಯವಸ್ಥೆ ಮಾಡಲಾಗುತ್ತಿದೆ. ಕಾರ್ವಿುಕರು ಒಮ್ಮೆ ಬೋಟ್ ಹತ್ತಿದ ನಂತರ ಮತ್ತೆ ಬಂದರಿಗೆ ಬಂದು ವಾಸ್ತವ್ಯ ಮಾಡುವಂತಿಲ್ಲ. ಹೆಚ್ಚಾಗಿ ಸ್ಥಳೀಯ ಕಾರ್ವಿುಕರನ್ನೇ ಬಳಸಿಕೊಳ್ಳುವ ಪ್ರಯತ್ನ ನಡೆದಿದೆ. | ವಿನಾಯಕ ಹರಿಕಂತ್ರ ಮೀನುಗಾರರ ಮುಖಂಡ