ಆಲ್ದೂರು: ಬಾಳೆಹೊನ್ನೂರು ಸಮೀಪದ ಕಡಬಗೆರೆಯಲ್ಲಿ ಶನಿವಾರ ಸರಣಿ ಅಪಘಾತ ನಡೆದು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದ ಸುಮಾರು 10 ಕಿಮೀ ದೂರದವರೆಗೆ ಎರಡು ಗಂಟೆಗಳ ಕಾಲ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಚಿಕ್ಕಮಗಳೂರು ಕಡೆಯಿಂದ ಬಂದ ಬೈಕ್ ಸವಾರನಿಗೆ ಬಾಳೆಹೊನ್ನೂರು ಕಡೆಯಿಂದ ಬಂದ ಪಿಕ್ಅಪ್ ವಾಹನ ದಾರಿ ಕೊಡಲು ಚಾಲಕ ಬ್ರೇಕ್ ಹಾಕಿದಾಗ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದೆ. ಹಿಂದೆ ಇದ್ದ ಕಾರು ಪಿಕ್ಅಪ್ ವಾಹನಕ್ಕೆ ಡಿಕ್ಕಿ ಹೊಡೆದು ರಸ್ತೆ ಬದಿಗೆ ಇಳಿದಿದೆ. ವಾಹನಗಳು ರಸ್ತೆಗೆ ಅಡ್ಡವಾಗಿ ಬಿದ್ದಿದ್ದರಿಂದ ಸುಮಾರು 2 ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು.
ಪಿಕ್ಅಪ್ ವಾಹನದಲ್ಲಿ ಟೊಮ್ಯಾಟೊ ತುಂಬಿದ್ದು ಸ್ಥಳೀಯರಿಂದ ವಾಹನ ಎತ್ತಲು ಸಾಧ್ಯವಾಗದ ಕಾರಣ ರಾತ್ರಿ 7.45ರ ಸುಮಾರಿಗೆ ಕ್ರೇನ್ ಮೂಲಕ ಎತ್ತಿ ತೆರವುಗೊಳಿಸಲಾಯಿತು. ವಾರಾಂತ್ಯವಾದ್ದರಿಂದ ಹಾಗೂ ಗೋರಿಗಂಡಿ ಸಮೀಪ ಕಾರ್ ರ‍್ಯಾಲಿ ಇದ್ದಿದ್ದರಿಂದ ವಾಹನ ಸಂಚಾರ ಹೆಚ್ಚಾಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕೆಲವರು ಮಾಗುಂಡಿ ಮೂಲಕ ಸಾಗಿದರೆ ಸಾಕಷ್ಟು ವಾಹನ ಸವಾರರು ಪಿಕ್ಅಪ್ ವಾಹನ ತೆರವು ಮಾಡುವವರೆಗೆ ಕಾದಿದ್ದರು.