ಭದ್ರಾವತಿ: ನಗರದ ಕಡದಕಟ್ಟೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಈ ಮೂಲಕ ಇಲ್ಲಿನ ಜನರ ಬಹಳ ವರ್ಷಗಳ ಬೇಡಿಕೆ ಈಡೇರಿದಂತಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ನಗರದ ಕಡದಕಟ್ಟೆಯಲ್ಲಿ ನಿರ್ಮಿಸಲಾದ ರೈಲ್ವೆ ಮೇಲ್ಸೇತುವೆ (ಎಲ್.ಸಿ.34) ಸಾರ್ವಜನಿಕ ಸಂಚಾರಕ್ಕೆ ಶನಿವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶಿವಮೊಗ್ಗದ ಸವಳಂಗ ರಸ್ತೆ, ಸೋಮಿನಕೊಪ್ಪ ಗೇಟ್ ಹಾಗೂ ಕಡದಕಟ್ಟೆ ಗೇಟ್ ಬಳಿಯ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಒಟ್ಟು 175 ಕೋಟಿ ರೂ.ಗಳ ಅನುದಾನ ಬಳಸಿಕೊಂಡು ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ. ಕಡದಕಟ್ಟೆ ರೈಲ್ವೇ ಮೇಲ್ಸೇತುವೆಗಾಗಿ 25.92 ಕೋಟಿ ರೂ. ಖರ್ಚು ಮಾಡಿದ್ದು, ಬೆಳೆಯುತ್ತಿರುವ ಭದ್ರಾವತಿ ನಗರಕ್ಕೆ ಅಭಿವೃದ್ಧಿಯ ಕೊಡುಗೆ ನೀಡಲಾಗಿದೆ. ಯಡಿಯೂರಪ್ಪ ಅವರ ನಿರ್ಧಾರದಿಂದಾಗಿ ರೈಲ್ವೇ ಮೇಲ್ಸೇತುವೆ ನಿರ್ಮಾಣ ಸಾಧ್ಯವಾಗಿದೆ ಎಂದರು.
ಎರಡೂವರೆ ವರ್ಷಗಳ ಕಾಲಾವಧಿಯಲ್ಲಿ ಕಡದಕಟ್ಟೆ ಮೇಲ್ಸೇತುವೆ ನಿರ್ಮಾಣವಾಗಿದೆ. ಇದೇ ಕಾಮಗಾರಿ ಮಾಡಲು ಹಿಂದೆ 8 ರಿಂದ 10 ವರ್ಷ ತೆಗೆದುಕೊಳ್ಳುತ್ತಿತ್ತು. ಆದರೆ ಈಗ ನಿಖರವಾದ ಸಮಯದಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಜಿಲ್ಲೆಯ 5 ಮೇಲ್ಸೇತುವೆಗಳ ಕಾಮಗಾರಿ ನಿರ್ಮಾಣಕ್ಕೆ ಸಹಕರಿಸಿದ ಪ್ರಧಾನ ಮಂತ್ರಿಗಳು, ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಶರಾವತಿ ಹಿನ್ನೀರಿನಲ್ಲಿ ಸಿಗಂದೂರು, ಕೊಲ್ಲೂರು ಮಾರ್ಗ ಕಲ್ಪಿಸುವ ನಿಟ್ಟಿನಲ್ಲಿ ನಿರ್ಮಿಸಲಾಗುತ್ತಿರುವ 2.5 ಕಿ.ಮೀ.ಉದ್ದನೆಯ ಮೇಲ್ಸೇತುವೆಯನ್ನು ಶೀಘ್ರದಲ್ಲಿ ಪ್ರಧಾನಮಂತ್ರಿಗಳಿಂದ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಶಾಸಕಿ ಬಲ್ಕೀಷ್‌ಬಾನು ಮಾತನಾಡಿ, ರೈಲ್ವೆ ಮೇಲ್ಸೇತುವೆ ನಿರ್ಮಾಣ ಇಲ್ಲಿನ ಬಹುಜನರ ಬೇಡಿಕೆಯಾಗಿದ್ದು ಇದೀಗ ಪೂರ್ಣಗೊಂಡಿದೆ. ಅದಕ್ಕಾಗಿ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮೇಲ್ಸೇತುವೆ ಕಾಮಗಾರಿಗೆ ಮನವಿ ಸಲ್ಲಿಸಲಾಗಿತ್ತು. ಅದು ಬಿ.ವೈ.ರಾಘವೇಂದ್ರ ಅವರ ಕಾಲದಲ್ಲಿ ಕೈಗೂಡಿದೆ ಎಂದರು.
ರೈಲ್ವೆ ಇಲಾಖೆ ಅಭಿಯಂತ ರಾಜ್‌ಕುಮಾರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿವೃತ್ತ ಅಭಿಯಂತ ಫೀರ್ ಪಾಷ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ, ಮಂಡಲದ ಅಧ್ಯಕ್ಷ ಜಿ.ಧರ್ಮಪ್ರಸಾದ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್.ಕುಮಾರ್, ನಗರಸಭಾ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಮಣಿ, ಸದಸ್ಯ ಬಿ.ಕೆ.ಮೋಹನ್, ಪ್ರಮುಖರಾದ ಮಂಗೋಟೆ ರುದ್ರೇಶ್, ಜಿ.ಆನಂದ್, ಕೂಡ್ಲಿಗೆರೆ ಹಾಲೇಶ್, ತೀರ್ಥಯ್ಯ, ರಾಮಲಿಂಗಯ್ಯ, ಚನ್ನೇಶ್, ಸಿಮೆಂಟ್ ಮಂಜಣ್ಣ, ರಾಜಶೇಖರ್ ಮತ್ತಿತರರಿದ್ದರು.