ಸೋಮವಾರಪೇಟೆ: ನೇರುಗಳಲೆ ಗ್ರಾಮ ಪಂಚಾಯಿತಿಯಲ್ಲಿ 1 ರಿಂದ 5 ಕಡತಗಳ ಆನ್‌ಲೈನ್ ವಿಲೇವಾರಿ ಕಚೇರಿಯನ್ನು ಶಾಸಕ ಡಾ.ಮಂತರ್ ಗೌಡ ಸೋಮವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಾಸಕರು, ತಾಲೂಕಿನಲ್ಲಿ ಇಂದಿಗೂ ಸಾಕಷ್ಟು ಕಡತಗಳು ವಿಲೇವಾರಿಯಾಗದೆ ಕಂದಾಯ ಕಚೇರಿಯಲ್ಲೆ ಬಿದ್ದಿವೆ. ಕೆಲ ನೌಕಕರರು ಮತ್ತು ಮಧ್ಯವರ್ತಿಗಳು ರೈತರ ಶೋಷಣೆ ಮಾಡುತ್ತಿರುವ ದೂರುಗಳು ಬಂದಿವೆ. ಸರ್ಕಾರ ವಿಶೇಷ ಆಂದೋಲನದ ಮೂಲಕ ಒಂದೇ ಬಾರಿಗೆ ದುರಸ್ತುಪಡಿಸುವ 1 ರಿಂದ 5 ಕಡತಗಳ ಕಚೇರಿಗೆ ಚಾಲನೆ ನೀಡಲಾಗಿದೆ. ರೈತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಕಂದಯ ಇಲಾಖೆಯಲ್ಲಿ ಸಿಗಬೇಕಾದ ದಾಖಲೆಗಳನ್ನು ಅಧಿಕಾರಿಗಳು ಜೋಡಿಸಬೇಕು. ರೈತರು ಮಧ್ಯವರ್ತಿಗಳನ್ನು ಭೇಟಿ ಆಗಬಾರದು ಎಂದು ತಿಳಿ ಹೇಳಿದರು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ಈ ಯೋಜನೆಯಲ್ಲಿ ಒಂದು ಗ್ರಾಮದ ಯಾವುದೇ ಸರ್ವೇ ನಂಬರ್ ತೆಗೆದುಕೊಂಡಲ್ಲಿ ಅದರಲ್ಲಿ ಬರುವ ಎಲ್ಲ ಜಮೀನುಗಳನ್ನು ಒಂದೇ ಬಾರಿಗೆ ದುರಸ್ತುಪಡಿಸಲಾಗುತ್ತದೆ. ಪ್ರಾರಂಭವಾಗಿ ನೇರುಗಳಲೆ ಗ್ರಾಮ ಪಂಚಾಯಿತಿ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು
ಕೆ.ಪಿ.ಚಂದ್ರಕಲಾ, ಕೆ.ಎಂ.ಲೋಕೇಶ್, ಬಿ.ಬಿ.ಸತೀಶ್, ಜನಾರ್ದನ್ ಇದ್ದರು.