ಜಿಲ್ಲೆ

ಕಡಕೋಳಕ್ಕೆ ಗಾಂಧಿ ಗ್ರಾಮ ಪುರಸ್ಕಾರದ ಗರಿ

ಶಿರಹಟ್ಟಿ: ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ನೀಡಲಾಗುವ 2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲೂಕಿನ ಕಡಕೋಳ ಗ್ರಾಮ ಪಂಚಾಯಿತಿ ಭಾಜನವಾಗಿದೆ.

ಗ್ರಾಮ ಪಂಚಾಯಿತಿಯು ಕಡಕೋಳ, ಹೊಸಳ್ಳಿ, ಜಲ್ಲಿಗೇರಿ ಮತ್ತು ಜಲ್ಲಿಗೇರಿ ತಾಂಡಾ ಗ್ರಾಮಗಳನ್ನೊಳಗೊಂಡಿದೆ.

2019-20ರಲ್ಲಿ ನಮ್ಮ ಗ್ರಾಮ ನಮ್ಮ ಯೋಜನೆಯಡಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಪ್ಲಾ್ಯನ್ ಪ್ಲಸ್, ಇ-ಗ್ರಾಮ ಸ್ವರಾಜ್ಯ ತಂತ್ರಾಂಶಗಳ ಮೂಲಕ ಪ್ರತಿಶತ 100ರಷ್ಟು ಕಾಮಗಾರಿ ಅನುಷ್ಠಾನಗೊಳಿಸಿದ್ದು ಈ ಗ್ರಾಪಂ ವೈಶಿಷ್ಟ್ಯವಾಗಿದೆ. ಸ್ವಚ್ಛ ಭಾರತ ಯೋಜನೆಯಡಿ ಪ್ರತಿ ಕುಟುಂಬಕ್ಕೂ ವೈಯಕ್ತಿಕ ಶೌಚಗೃಹಗಳ ನಿರ್ವಣದ ಮೂಲಕ ಬಯಲು ಬಹಿರ್ದೆಸೆ ಮುಕ್ತವನ್ನಾಗಿ ಮಾಡಿದೆ.

ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ವಸತಿ ಯೋಜನೆಯಡಿ ಮಂಜೂರಾಗಿರುವ ಮನೆಗಳ ಪೈಕಿ ಶೇ. 85ರಷ್ಟು ಪ್ರಗತಿ ಸಾಧಿಸಿದೆ. ಲಭ್ಯವಿರುವ ಪೌರ ಕಾರ್ವಿುಕರನ್ನು ಬಳಸಿಕೊಂಡು ತ್ಯಾಜ್ಯ ವಿಲೇವಾರಿ ಮೂಲಕ ಗ್ರಾಮ ನೈರ್ಮಲ್ಯ ಕಾಪಾಡಿ ಜನರಿಗೆ ಆರೋಗ್ಯ ಭಾಗ್ಯ ಕರುಣಿಸಿದೆ. ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ 4 ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿ ಎಲ್ಲರಿಗೂ ಶುದ್ಧ ಕುಡಿಯುವ ನೀರು ಒದಗಿಸುವಲ್ಲಿ ಗ್ರಾಪಂ ಯಶಸ್ವಿಯಾಗಿದೆ.

ತಾಲೂಕಿನಲ್ಲಿ ಕಡಕೋಳ ಗ್ರಾಪಂ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ಅಭಿಮಾನದ ಸಂಗತಿ. ಸರ್ಕಾರದ ಎಲ್ಲ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಮಾಡಿದ ಪ್ರಯತ್ನ ಯಶಸ್ಸು ನೀಡಿದೆ. ಇದರ ಹಿಂದೆ ಜನಪ್ರತಿನಿಧಿಗಳು, ಪಿಡಿಒ, ಸಿಬ್ಬಂದಿ ಹಾಗೂ ಗ್ರಾಮದ ಸಾರ್ವಜನಿಕರ ಪಾತ್ರ, ಸಹಕಾರ ಮುಖ್ಯವಾಗಿದೆ. | ಡಾ. ಎನ್.ಎಚ್. ಓಲೇಕಾರ ಶಿರಹಟ್ಟಿ ತಾಪಂ ಇಒ
ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದ ತಾಲೂಕಿನ ಮೊದಲ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಹೆಮ್ಮೆಯ ಸಂಗತಿ. ಪುರಸ್ಕಾರದ ಹಿಂದೆ ಗ್ರಾಮಸ್ಥರ ಸಹಭಾಗಿತ್ವ, ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ನೀಡಿದ ಸಹಕಾರ ಜೊತೆಗೆ ಆಡಳಿತ ಮಂಡಳಿ ಸದಸ್ಯರ ಬೆಂಬಲ, ಸಲಹೆ ಕಾರಣವಾಗಿದೆ. | ಎಸ್.ಟಿ. ಕಪ್ಪಲಿ ಕಡಕೋಳ ಗ್ರಾಪಂ ಪಿಡಿಒ

ಗಮನ ಸೆಳೆದ ಅಂದಿನ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

ಗ್ರಾಮೀಣ ಭಾಗದ ಜನರ ಸಮಸ್ಯೆಗಳ ನಿವಾರಣೆ ಮತ್ತು ತ್ವರಿತ ಪರಿಹಾರಕ್ಕಾಗಿ ಅಂದಿನ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಾಲೂಕಿನ ಕಡಕೊಳ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. 2019 ಅಕ್ಟೋಬರ್ 11ರಂದು ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ಸರ್ಕಾರಿ ಬಸ್​ನಲ್ಲಿ ಕಡಕೋಳ ಗ್ರಾಮಕ್ಕೆ ಆಗಮಿಸಿದ್ದರು. ಶಾಲೆ ಆವರಣದಲ್ಲಿ ರಾತ್ರಿ 11 ಗಂಟೆವರೆಗೆ ಸಾರ್ವಜನಿಕರ ಸಭೆ ನಡೆಸಿ ಅಹವಾಲು ಸ್ವೀಕರಿಸಿದ್ದರು. ನಂತರ ವಸತಿ ನಿಲಯದಲ್ಲಿ ವಾಸ್ತವ್ಯ ಮಾಡಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಟ್ಟಿದ್ದರು.