ಮೈಸೂರು: ಮನಸ್ಸು ಬದಲಿಸಿದರೆ ಭವಿಷ್ಯ ಬದಲಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಗುರಿ ಇಟ್ಟುಕೊಂಡು ಸಾಧನೆಗೆ ಕಠಿಣ ಶ್ರಮಪಡಬೇಕು ಎಂದು ಎಂಡಿಇಎಸ್ ತರಬೇತಿ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯ ಕಾರ್ಯನಿರ್ವಣಾಧಿಕಾರಿ ಸೆಬೆ ಮಾವೇಲಿ ಹೇಳಿದರು.
ರಮ್ಮನಹಳ್ಳಿಯ ಸಂತ ಜೋಸೆಫರ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಜೋ-ಕಾನ್‌ಕ್ಲೇವ್ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಭೆ ವಿಕಸನ, ಆಸೆ ಈಡೇರಿಕೆಗೆ, ಪರಸ್ಪರ ಸ್ನೇಹ ವಿನಿಮಯ ಮತ್ತು ರಚನಾತ್ಮಕತೆಗೆ ಇಂತಹ ವೇದಿಕೆಗಳು ಅವಕಾಶ ಒದಗಿಸಿಕೊಡುತ್ತವೆ. ಇದನ್ನು ಸವಾಲಾಗಿ ಸ್ವೀಕರಿಸಿ, ಅವಕಾಶ ಸದುಪಯೋಗ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ಮಾತನಾಡಿ, ಇಲ್ಲಿ ಪಠ್ಯಕ್ಕೆ ಸಂಬಂಧಿಸಿದ ಸ್ಪರ್ಧೆಗಳನ್ನು ಏರ್ಪಡಿಸಿರುವುದು ಉತ್ತಮವಾದುದು. ಇದರಿಂದ ವಿಷಯದಲ್ಲಿ ಹೆಚ್ಚಿನ ಪರಿಣತಿ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಇದು ಅವಕಾಶಗಳ ಯುಗ. ಹೀಗಾಗಿ ಎದುರಾಗುವ ಎಲ್ಲ ಅವಕಾಶಗಳಲ್ಲಿ ಅತ್ಯುತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಕ್ಕಾಗಿ ಸೋಲು- ಗೆಲುವು ನೋಡದೆ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಆ ಮೂಲಕ ಪ್ರಾಪಂಚಿಕ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲೆ ಡಾ. ಪೃಥ್ವಿ ಎಸ್.ಶಿರಹಟ್ಟಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಅವಂತಿ, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ರಚನಾ ಪ್ರದೀಪ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪುಷ್ಪಾ, ಕನ್ನಡ ವಿಭಾಗದ ಮುಖ್ಯಸ್ಥ ಎ.ಎಸ್.ಮಹೇಶ್ ಇದ್ದರು.
ಜೋ- ಕಾನ್ ಕ್ಲೇವ್ ಉತ್ಸವವದಲ್ಲಿ 10 ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ಸ್ನಾತಕ ಮತ್ತು ಸ್ನಾತಕೋತ್ತರ ಕಲಿಕೆಯ ನಗರದ 40 ಕಾಲೇಜುಗಳನ್ನು ಆಹ್ವಾನಿಸಲಾಗಿತ್ತು.
ಐಟಿ ಆಕ್ಷನ್, ಮಾಸ್ಟರ್ ಮೈಂಡ್, ಪಿಕ್ಸೆಲ್ ಟು ಮಾಸ್ಟರ್ ಪೀಸ್ ಲೋಗೋಯನ್, ಫ್ಯೂಷನ್ ಮಾಸ್ಟರ್, ಕಾಮಿವುಡ್, ಡೈಲಾಗ್ ಡೈವ್, ಪರ್ಸನಗ್ಗಿಯೊ, ಪ್ರಶ್ನೋತ್ತರ ರಸಾಯನ, ವಾಕ್ ಚಾತುರ್ಯ ಸ್ಪರ್ಧೆಗಳನ್ನು ಕಾಲೇಜಿನ ವಾಣಿಜ್ಯ ವಿಭಾಗ, ಗಣಕ ವಿಜ್ಞಾನ ವಿಭಾಗ, ಆಂಗ್ಲ ಭಾಷಾ ವಿಭಾಗ, ಕನ್ನಡ ವಿಭಾಗ ಮತ್ತು ಹಿಂದಿ ವಿಭಾಗಗಳು ಹಮ್ಮಿಕೊಂಡಿದ್ದವು. ಕಾಲೇಜಿನ ಆಸಿಯಾ ಸುಲ್ತಾನ ಅವರ ರಚಿಸಿದ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಕೂಡ ಏರ್ಪಡಿಸಲಾಗಿತ್ತು.