ಚಿತ್ರದುರ್ಗ: ಸಮಾಜದಲ್ಲಿ ಎಷ್ಟೇ ದೊಡ್ಡವರಿರಲಿ, ಶ್ರೀಮಂತರಾಗಿರಲಿ, ಪ್ರಭಾವಿಗಳೇ ಆದರೂ ತಪ್ಪು ಮಾಡಿದವರಿಗೆ ಶಿಕ್ಷೆಯಾಗುವ ಮೂಲಕ ಸಂದೇಶ ರವಾನೆಯಾಗಬೇಕು ಎಂದು ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.
ಕೊಲೆಯಾದ ರೇಣುಕಸ್ವಾಮಿ ನಿವಾಸಕ್ಕೆ ಬುಧವಾರ ಭೇಟಿ ನೀಡಿ ಪಾಲಕರು, ಪತ್ನಿ ಸೇರಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ಈ ದುರ್ಘಟನೆ ಬಹಳ ನೋವು, ಆಘಾತ ಉಂಟು ಮಾಡಿದೆ. ಸರ್ಕಾರ ಇಂತಹ ಘಟನೆಗಳು ನಡೆದಾಗ ಗಂಭೀರವಾಗಿ ಪರಿಗಣಿಸಬೇಕು. ತಪ್ಪು ಯಾರಿಂದಲೇ ಆಗಿದ್ದರೂ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ಕಾನೂನು ಭಯ ಇಲ್ಲದಿದ್ದರೆ, ದುಷ್ಕೃತ್ಯಗಳು ಮುಂದುವರೆಯಲಿವೆ. ಅದಕ್ಕೆ ಅವಕಾಶ ನೀಡದೆ, ಸರ್ಕಾರ ವಿಶೇಷ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಥವಾ ಇನ್ನಾವುದೊ ಇಲಾಖೆಯಲ್ಲಿ ಪತ್ನಿಗೆ ಉದ್ಯೋಗ ನೀಡಬೇಕು. ಇದು ಸರ್ಕಾರಕ್ಕೆ ದೊಡ್ಡದೇನಲ್ಲ. ಈ ಮೂಲಕ ಜೀವನಾಧಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.