ಜಿಲ್ಲೆ

ಕಠಿಣ ಪರಿಶ್ರಮವಿದ್ದರೆ ಯಶಸ್ಸು

ಮೈಸೂರು: ಜೀವನದಲ್ಲಿ ಸಾಧನೆ ಮಾಡಲು ಸುಲಭದ ಹಾದಿಗೆ ಆಸೆ ಪಡದೆ, ನಿರಂತರ ಕಠಿಣ ಪರಿಶ್ರಮದಿಂದ ದುಡಿದರೆ ಯಶಸ್ಸು ನಿಶ್ಚಿತ ಎಂದು ಅಪರ ಜಿಲ್ಲಾಧಿಕಾರಿ ಪಿ. ಶಿವರಾಜು ಹೇಳಿದರು.


ನಗರದ ಲಕ್ಷ್ಮೀಪುರಂ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಆವರಣದಲ್ಲಿರುವ ಜ್ಞಾನಬುತ್ತಿ ಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬ್ಯಾಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷೆಗಳ ಉಚಿತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.


ಸ್ಪರ್ಧಾರ್ಥಿಗಳು ತಮ್ಮ ಎಲ್ಲ ಮಿತಿಗಳನ್ನು ಮೀರಿ ತಮ್ಮೊಳಗಿನ ಆತ್ಮ ಸ್ಥೈರ್ಯದಿಂದ ಸಾಮರ್ಥ್ಯ ವೃದ್ಧಿ ಮಾಡಿಕೊಂಡು ಸಾಧನೆ ಮಾಡಲು ಪರಿಶ್ರಮದಿಂದ ಮುಂದುವರಿಯಬೇಕು ಎಂದು ಸಲಹೆ ನೀಡಿದರು.


ಪರಂಪರೆ ಇಲಾಖೆಯ ಆಯುಕ್ತ ಎ.ದೇವರಾಜು ಮಾತನಾಡಿ, ಜೀವನದಲ್ಲಿ ಗುರಿಯಿಟ್ಟುಕೊಂಡು ಸಾಧನೆಗೆ ಮುಂದಾಗಬೇಕು. ಈ ಸಂದರ್ಭದಲ್ಲಿ ಮೊದಲು ನಿಮ್ಮಲ್ಲಿ ಆತ್ಮವಿಶ್ವಾಸವಿದ್ದರೆ ನನ್ನಿಂದಾಗದು ಎಂಬ ಪದ ನಿಮ್ಮಲ್ಲಿ ಸುಳಿಯಲೇಬಾರದು. ಉನ್ನತ ಹುದ್ದೆಗಳನ್ನು ಅಲಂಕರಿಸಿದವರ ಪಟ್ಟಿಯನ್ನೊಮ್ಮೆ ಅವಲೋಕಿಸಿದರೆ ಅವರೆಲ್ಲ ಗ್ರಾಮೀಣ, ಬಡತನ, ಹಿಂದುಳಿದ ವರ್ಗದ ಹಿನ್ನೆಲೆಯಿಂದ ಬಂದವರೇ ಆಗಿರುತ್ತಾರೆ. ಹೀಗಾಗಿ ಕುಂಟುನೆಪ ಹೇಳದೆ ಬದ್ಧತೆಯಿಂದ ಕಠಿಣ ಪರಿಶ್ರಮ ಹಾಕಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.


ಹಿರಿಯ ಸಹಕಾರಿ ವೈ.ಎನ್. ಶಂಕರೇಗೌಡ, ಎಂ.ಮನೋಜ್ ಕುಮಾರ್, ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿ ಎಚ್.ಬಾಲಕೃಷ್ಣ, ರೋಹನ್ ರವಿಕುಮಾರ್ ಮತ್ತಿತರರು ಹಾಜರಿದ್ದರು.