ಜಿಲ್ಲೆ

ಕಟ್ಪಡ ಕಾರ್ಮಿಕರ ಪರಿಹಾರ ಹಣ ಖಾತೆಗೆ ಜಮ್ಮೆ ಮಾಡಿ

ಬಸವಕಲ್ಯಾಣ: ಕಟ್ಟಡ ಕಾರ್ಮಿಕರಿಗಾಗಿ 5 ಸಾವಿರ ರೂ. ಪರಿಹಾರವನ್ನು ಮುಖ್ಯಮಂತ್ರಿಗಳು ಘೋಷಿಸಿದ್ದು, ಈ ಹಣವನ್ನು ಎಲ್ಲ ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಮನವಿ ಮಾಡಿದೆ.
ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ವೇದಿಕೆ ಪದಾದಿಕಾರಿಗಳ ನಿಯೋಗದಿಂದ ಪಟ್ಟಣದ ಕಾರ್ಮಿಕರ ನಿರೀಕ್ಷಕರ ಕಚೇರಿಯಲ್ಲಿ ಸಲ್ಲಿಸಲಾಯಿತು. ಲಾಕ್ಡೌನ್ ಹಿನ್ನೆಲೆಯಲ್ಲಿ ವಿಶೇಷ ಪ್ಯಾಕೇಜ್ ಯೋಜನೆಯಡಿ ಕಟ್ಟಡ ಕಾರ್ಮಿಕರಿಗಾಗಿ ಪ್ರತಿ ಫಲಾನುಭವಿಗಳಿಗೆ ತಲಾ 5 ಸಾವಿರ ರೂ. ಘೋಷಿಸಲಾಗಿದೆ. ಆದರೆ ಕೆಲವರ ಖಾತೆಗೆ ಮಾತ್ರ ಹಣ ಜಮಾ ಆಗಿದೆ. ಉಳಿದವರ ಖಾತೆಗೆ ಜಮಾ ಆಗಿಲ್ಲ ಎಂದು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.
ಪರಿಹಾರ ಧನಕ್ಕಾಗಿ ಕಟ್ಟಡ ಕಾರ್ಮಿಕರು ನಿತ್ಯ ತಾಲೂಕು ಕಚೇರಿ ಮತ್ತು ಬ್ಯಾಂಕ್ಗೆ ಅಲೆಯುತ್ತಿದ್ದಾರೆ. ಕಟ್ಟಡ ಕಾರ್ಮಿಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಕಟ್ಟಡ ಕಾರ್ಮಿಕರ ಖಾತೆಗೆ ಪರಿಹಾರದ ಹಣವನ್ನು ಜಮಾ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಕೋರಲಾಗಿದೆ. ವೇದಿಕೆ ತಾಲೂಕು ಅಧ್ಯಕ್ಷ ಸಂಜು ಯಾದವ, ಪ್ರಧಾನ ಕಾರ್ಯದರ್ಶಿ ಪದ್ಮಾಕರ್ ಯಾದವ, ನಗರ ಘಟಕದ ಅಧ್ಯಕ್ಷ ಅಮೂಲ ಸದಾನಂದೆ, ಯುವ ಘಟಕ ಅಧ್ಯಕ್ಷ ಲಕ್ಷ್ಮಣ ಸಿಂಧೆ, ಶಂಕರ ಪುಣೆ, ನವೀನ ಯಾದವ ಇತರರಿದ್ದರು.