ಜಿಲ್ಲೆ

ಕಟ್ಟಡಗಳ ತೆರವು ಕಾರ್ಯದಲ್ಲಿ ತಾರತಮ್ಯ

ಕಂಪ್ಲಿ: ಪಟ್ಟಣದ ನಡುವಿನ ಮಸೀದಿಯಿಂದ ಜೋಗಿ ಕಾಲುವೆತನಕ ರಸ್ತೆ ವಿಸ್ತರಣೆಗಾಗಿ ಕಟ್ಟಡಗಳ ತೆರವು ಕಾರ್ಯ ಭಾನುವಾರವೂ ಮುಂದುವರಿಯಿತು.

ಕಟ್ಟಡಗಳ ತೆರವು ಕಾರ್ಯಾಚರಣೆಯಿಂದಾಗಿ ರಸ್ತೆಗೆ ಬಿದ್ದಿದ್ದ ಕಲ್ಲು, ಮಣ್ಣು ಹಾಗೂ ಇತರ ತ್ಯಾಜ್ಯ ಸಾಮಗ್ರಿ ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿತ್ತು. ಚಿಂದಿ ಹಾಗೂ ಗುಜರಿ ಆಯುವವರು ಚಿಂದಿ, ಪ್ಲಾಸ್ಟಿಕ್, ಕಬ್ಬಿಣ ಇತ್ಯಾದಿ ಸಾಮಗ್ರಿಗಳನ್ನು ಆಯ್ದರು.

ನಿವಾಸಿ ಗೌಡು ್ರಗೋಪಾಲಕೃಷ್ಣ ಮಾತನಾಡಿ, ರಸ್ತೆ ವಿಸ್ತರಣೆ ಕಾಮಗಾರಿ ಕೈಗೊಳ್ಳಬಾರದು ಎಂದು 28 ಮನೆಗಳ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದೆವು. ಏ.12ರಿಂದ ಏ.14ರತನಕ ರಜೆ ಇರುವ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಾಗಿ ಪುರಸಭೆಯಿಂದ ಮನೆಗಳನ್ನು ತೆರವು ಮಾಡಲಾಗುತ್ತಿದೆ. ಇದು ದೌರ್ಜನ್ಯದ ಪ್ರತೀಕವಾಗಿದೆ. ರಸ್ತೆ ವಿಸ್ತರಣೆಗೆ ನಮ್ಮ ಸಮ್ಮತಿಯಿದ್ದು, ಕಾಲಾವಕಾಶ ಕೋರಿದ್ದೆವು. ಏಕಾಏಕಿ ಮನೆಗಳನ್ನು ತೆರುವುಗೊಳಿಸಿದ್ದರಿಂದ ತೊಂದರೆಗೊಳಾಗಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಾ.ರಾಜಕುಮಾರ್ ರಸ್ತೆ ವಿಸ್ತರಣೆ ಸಂದರ್ಭದಲ್ಲಿಯೇ ನಡುವಿನ ಮಸೀದಿಯಿಂದ ಜೋಗಿ ಕಾಲುವೆತನಕ ವಿಸ್ತರಣೆ ಕಾರ್ಯ ಕೈಗೊಳ್ಳಬೇಕಿತ್ತು. ಪ್ರಭಾವದಿಂದ ಕಾಮಗಾರಿ ಮುಂದೂಡಿ ಪುರಸಭೆ ತಾರತಮ್ಯ ಎಸಗಿದೆ ಎಂದು ಕೆಲವರು ಆರೋಪಿಸಿದರು.

ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ಮಾತನಾಡಿ, ರಸ್ತೆ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿದ್ದು, ಅನೇಕರು ಸ್ವಯಂಪ್ರೇರಿತರಾಗಿ ಅತಿಕ್ರಮಿತ ಭಾಗಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಉಳಿದಂತೆ ಕಟ್ಟಡಗಳನ್ನು ಪುರಸಭೆ ಜೆಸಿಬಿಯಿಂದ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.

ರಸ್ತೆ ಮಧ್ಯ ಭಾಗದಿಂದ ಎರಡೂ ಕಡೆ 17.5 ಅಡಿ ತೆರವುಗೊಳಿಸಬೇಕಿದೆ. ರಸ್ತೆಗೆ ಬಿದ್ದಿರುವ ತ್ಯಾಜ್ಯವನ್ನು ಪುರಸಭೆಯ ಘನತ್ಯಾಜ್ಯ ವಸ್ತು ನಿರ್ವಹಣೆ ಘಟಕಕ್ಕೆ ಸಾಗಿಸಲಾಗುವುದು. ಕುಡಿವ ನೀರು, ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಕ್ರಮವಹಿಸಲಾಗಿದೆ. ರಸ್ತೆ ವಿಸ್ತರಣೆ ಕಾರ್ಯ ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದ್ದು ಜನರು ಸಹಕರಿಸಬೇಕೆಂದು ದುರುಗಣ್ಣ ಕೋರಿದರು.