ಜಿಲ್ಲೆ

ಕಟ್ಟಡ ನಿರ್ಮಾಣಕ್ಕಾಗಿ ಕೆಕೆಆರ್‌ಡಿಬಿಗೆ ಮನವಿ

ದೇವದುರ್ಗ: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಕಟ್ಟಡ ನಿರ್ಮಾಣಕ್ಕಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲು ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಂಗಳವಾರ ನಿರ್ಣಯ ಕೈಗೊಳ್ಳಲಾಯಿತು.

ಪಟ್ಟಣದ ಟಿಎಪಿಸಿಎಂಎಸ್ ಕಚೇರಿಯಲ್ಲಿ ಅಧ್ಯಕ್ಷ ಶರಣಗೌಡ ಮಾಲಿಪಾಟೀಲ್ ಮದರಕಲ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಶರಣಗೌಡ ಮದರಕಲ್ ಮಾತನಾಡಿ, ಸಂಘ ಹಲವು ರೈತರಿಗೆ ಸಾಲ ಸೌಲಭ್ಯದೊಂದಿಗೆ ಕೃಷಿ ಸಂಬಂಧಿತ ಪರಿಕರ ವಿತರಣೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಸದ್ಯ ಹಳೇ ಕಟ್ಟಡದಲ್ಲಿ ಕಚೇರಿ ಇದ್ದು ಅನುದಾನ ಕೊರತೆಯಿಂದ ಹೊಸ ಕಟ್ಟಡ ನಿರ್ಮಿಸಿಲ್ಲ. ಕಾರ್ಯಕಾರಿ ಸಮಿತಿ ನಿಯೋಗ ಕೆಕೆಆರ್‌ಡಿಬಿ ಅಧ್ಯಕ್ಷ ಅಜಯಸಿಂಗ್ ಅವರನ್ನು ಶೀಘ್ರ ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಲಿದೆ ಎಂದರು.

ಕಟ್ಟಡದ ಅಗತ್ಯ ಹಾಗೂ ಅನುದಾನ ಬೇಡಿಕೆ ಬಗ್ಗೆ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರಿಗೂ ಮನವಿ ಮಾಡಲಾಗಿದೆ. ಕಟ್ಟಡದ ನೀಲಿನಕ್ಷೆ ಸಿದ್ಧಪಡಿಸಿ ಅನುದಾನ ನೀಡುವಂತೆ ಸಹಕಾರ ಇಲಾಖೆ ಹಾಗೂ ಕೆಕೆಆರ್‌ಡಿಬಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪಟ್ಟಣದ ಪ್ರಮುಖ ಭಾಗದಲ್ಲಿ ನಿವೇಶನವಿದ್ದು, ಕೆಲವೆಡೆ ವ್ಯಾಪಾರಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ವ್ಯಾಪಾರಿಗಳ ಮನವಿ ಮೇರೆಗೆ ತಿಂಗಳ ಬಾಡಿಗೆ ದರವನ್ನು ಇಳಿಸಿ ಪ್ರೋತ್ಸಾಹಿಸಲಾಗಿದೆ. ಸಂಘದ ನಿವೇಶನದ ಸುತ್ತ ಕಾಂಪೌಂಡ್ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ ಮಾತನಾಡಿ, ರೈತರಿಗೆ ಅನುಕೂಲವಾಗುವ ಚಟುವಟಿಕೆಗಳನ್ನು ಸಂಘ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಅನುದಾನದ ಕೊರತೆ ನಡುವೆಯೂ ಸಂಘ ಉತ್ತಮ ಕೆಲಸ ಮಾಡುತ್ತಿದೆ ಎಂದರು.