ಜಿಲ್ಲೆ

ಕಟ್ಟಡ ಕಾರ್ಮಿಕರಿಗೆ ಉಚಿತ ಅಕ್ಕಿ ವಿತರಣೆ; ಸಂಕಷ್ಟದಲ್ಲಿ ಸಿಲುಕಿದ ಶ್ರಮಿಕರಿಗೆ ಸಹಾಯ ಹಸ್ತ ನೀಡಿ

ಹೊಸಕೋಟೆ: ದೇಶದಲ್ಲಿ ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಕಟ್ಟಡ ಕಾರ್ಮಿಕರಿಗೆ ಸಹಾಯ ಹಸ್ತ ನೀಡುವ ಕೆಲಸ ತುರ್ತಾಗಿ ಆಗಬೇಕಿದೆ ಎಂದು ಶ್ರೀ ಪಟೇಲಮ್ಮ ದೇವಿ ಕಟ್ಟಡ ಕಾರ್ಮಿಕ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷ ರಾಮಾಂಜಿನಿ ಕೋರಿದ್ದಾರೆ.

ನಗರದ ಎಂ.ವಿ. ಬಡಾವಣೆಯ ಪಟೇಲಮ್ಮ ದೇವಾಲಯ ಆವರಣದಲ್ಲಿ 300ಕ್ಕೂ ಹೆಚ್ಚು ಕಟ್ಟಡ ಕೂಲಿ ಕಾರ್ಮಿಕರಿಗೆ ತಲಾ 10 ಕೆ.ಜಿ. ಅಕ್ಕಿ ವಿತರಿಸಿ ಮಾತನಾಡಿದರು.

ಕರೊನಾ ಸೋಂಕು ವಿಶ್ವಾದ್ಯಂತ ದಿನೇದಿನೆ ವ್ಯಾಪಕವಾಗಿ ಹರಡುತ್ತಿದ್ದು, ಇದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದೆ. ಸಾರ್ವಜನಿಕರು ರಸ್ತೆಗೆ ಮಾತ್ರವಲ್ಲ, ಮನೆಯಿಂದಲೂ ಹೊರ ಬಾರದಂತಾಗಿದೆ. ಕಾರ್ಮಿಕ ಇಲಾಖೆಯಲ್ಲಿ ಬಳಕೆಯಾಗದೆ ಉಳಿದಿರುವ ಕೋಟ್ಯಂತರ ರೂಪಾಯಿಯನ್ನು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾರ್ಮಿಕರಿಗಾಗಿ ಬಳಸಬೇಕು ಎಂದು ಆಗ್ರಹಿಸಿದರು.

ಲಾಕ್‌ಡೌನ್ ಸಂದರ್ಭದಲ್ಲಿ ಸರ್ಕಾರ ಕೂಲಿ ಕಾರ್ಮಿಕರಿಗೆ ಹಲವು ಯೋಜನೆ ಜಾರಿಗೊಳಿಸಿದೆಯಾದರೂ ಕಾರ್ಮಿಕರ ಸಮಸ್ಯೆಗಳಿಗೆ ಸ್ಥಳೀಯ ಕಾರ್ಮಿಕ ಅಧಿಕಾರಿ ಮಾತ್ರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಪಟೇಲಮ್ಮ ದೇವಿ ಕಟ್ಟಡ ಕಾರ್ಮಿಕ ಹಾಗೂ ಅಸಂಘಟಿತ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಎಚ್.ಬಿ.ಟಿ. ನಾಗರಾಜ್, ಉಪಾಧ್ಯಕ್ಷ ಸಿ. ಮುನಿರಾಜ್, ಕಾರ್ಯದರ್ಶಿ ಮೃತ್ಯುಂಜಯ, ಜಂಟಿ ಕಾರ್ಯದರ್ಶಿ ಎಚ್.ವಿ. ಗೋವಿಂದ್, ಖಜಾಂಚಿ ಎಂ. ಶ್ರೀನಿವಾಸ್, ಸದಸ್ಯರಾದ ಪಿ. ಕೃಷ್ಣಪ್ಪ, ಎಂ. ಚಂದ್ರಪ್ಪ, ದೇವಾಲಯ ಅರ್ಚಕರಾದ ನಂದೀಶ್, ಮಂಜುನಾಥ್, ಕೋಳಿ ಮುನಿರಾಜ್ ಉಪಸ್ಥಿತರಿದ್ದರು.

ಕಟ್ಟಡ ಕೂಲಿ ಕಾರ್ಮಿಕರಿಗೆ ಸರ್ಕಾರ ನೀಡಿರುವ ಎಲ್ಲ ಸೌಲಭ್ಯವನ್ನೂ ಕಲ್ಪಿಸಲಾಗುತ್ತಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಬಿಡುಗಡೆಯಾದ ವಿಶೇಷ ಅನುದಾನವನ್ನು ಮಾ.21ರಿಂದಲೇ ಬಿಡುಗಡೆ ಮಾಡಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗುತ್ತಿದೆ. ಸುರೇಶ್, ಲೇಬರ್ ಇನ್‌ಸ್ಪೆಕ್ಟರ್, ಹೊಸಕೋಟೆ