ಜಿಲ್ಲೆ

ಕಟ್ಟಡ ಕಾರ್ಮಿಕರ ಪ್ರತಿಭಟನೆ

ಮೈಸೂರು: ತಿಂಗಳಿಗೆ ಕನಿಷ್ಠ 26 ಸಾವಿರ ರೂ. ವೇತನ ಮತ್ತು 10 ಸಾವಿರ ರೂ. ಪಿಂಚಣಿ ಖಾತ್ರಿಪಡಿಸಬೇಕು ಎಂದು ಆಗ್ರಹಿಸಿ ಕಟ್ಟಡ ಕಾರ್ಮಿಕರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.


ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ ನೇತೃತ್ವದಲ್ಲಿ ಕುವೆಂಪುನಗರದ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು.


ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ದುರ್ಬಳಕೆ ನಿಲ್ಲಿಸಲು ಕ್ರಮ ತೆಗೆದುಕೊಳ್ಳಬೇಕು. ಜತೆಗೆ, ಕಾರ್ಮಿಕರ ವಿರೋಧಿ ಸಂಹಿತೆಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.


ನಿರ್ಮಾಣ ಸಾಮಗ್ರಿಗಳು, ಸಲಕರಣೆಗಳ ಬೆಲೆ ನಿಯಂತ್ರಿಸಬೇಕು. ಸೆಸ್ ಸರಿಯಾದ ಸಂಗ್ರಹಕ್ಕೆ ಕ್ರಮವಹಿಸಿ ವಂಚನೆ ತಡೆಗಟ್ಟಿ, ನಿರ್ಮಾಣ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಸೃಷ್ಟಿಸಬೇಕು. ಬಾಕಿ ಇರುವ 2021-22ನೇ ಶೈಕ್ಷಣಿಕ ಅರ್ಜಿಗಳನ್ನು ವಿಲೇವಾರಿ ಮಾಡಿ ಕೂಡಲೇ ಹಣ ವರ್ಗಾವಣೆ ಮಾಡಬೇಕು. ಕಾರ್ಡ್ ನವೀಕರಣಕ್ಕೆ ವೇತನ ಚೀಟಿ ಮತ್ತು ಹಾಜರಾತಿ ಪಟ್ಟಿ ಕಡ್ಡಾಯ ಆದೇಶ ವಾಪಸ್ ಪಡೆಯಬೇಕು. ಬೋಗಸ್ ಕಾರ್ಡ್ ನಿಯಂತ್ರಿಸಿ ನೈಜ ಕಾರ್ಮಿಕರನ್ನು ಮಾತ್ರ ನೋಂದಣಿ ಮಾಡಬೇಕು ಎಂದು ಒತ್ತಾಯಿಸಿದರು.


ಆರೋಗ್ಯ ಸಂಜೀವಿನಿ ಯೋಜನೆಯನ್ನು ಕಟ್ಟಡ ಕಾರ್ಮಿಕರ ಕುಟುಂಬಗಳಿಗೂ ನೀಡಬೇಕು. ಜೀವಿತಾವಧಿ ಪ್ರಮಾಣಪತ್ರವನ್ನು ಕಂದಾಯ ಇಲಾಖೆಯ ಬದಲಾಗಿ ಕಾರ್ಮಿಕ ಇಲಾಖೆಯೇ ನೀಡಬೇಕು. ಅರ್ಜಿಗಳ ವಿಲೇವಾರಿ ವಿಳಂಬ ತಡೆಗಟ್ಟಿ, ಕಾರ್ಮಿಕ ಇಲಾಖೆಯ ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಿರ್ಮಾಣ ಕಾರ್ಮಿಕರಿಗೆ ಭವಿಷ್ಯನಿಧಿ ಯೋಜನೆ ಜಾರಿಗೆ ತರಬೇಕು. ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.


ಸಂಘಟನೆಯ ಅಧ್ಯಕ್ಷ ಎಚ್.ಎಂ.ಬಸವಯ್ಯ, ಪ್ರಧಾನ ಕಾರ್ಯದರ್ಶಿ ಸಿ.ಬಿ.ನವೀನ್‌ಕುಮಾರ್, ಖಜಾಂಚಿ ವಿ.ಸೋಮಶಂಕರ್ ಸೇರಿದಂತೆ ಇನ್ನಿತರರಿದ್ದರು.