ಜಿಲ್ಲೆ

ಕಚೇರಿಗಳಿಗೆ ಗ್ರಾಮಸ್ಥರ ಮುತ್ತಿಗೆ

ಶ್ರೀರಂಗಪಟ್ಟಣ: ತಾಲೂಕಿನ ಕಾಳೇನಹಳ್ಳಿ ಗ್ರಾಮ ಸುತ್ತಮುತ್ತ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಹಾಗೂ ರಾತ್ರಿ ವೇಳೆಯೂ ಭಾರಿ ವಾಹನಗಳಲ್ಲಿ ನಿರಂತರ ಗಣಿ ಸಾಮಗ್ರಿಗಳನ್ನು ಸಾಗಣೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿ ಈ ಭಾಗದ ಗ್ರಾಮಗಳ ಗ್ರಾಮಸ್ಥರು ವಿವಿಧ ಸರ್ಕಾರಿ ಕಚೇರಿಗಳಿಗೆ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ, ತಾಲೂಕು ಸಾಮಾಜಿಕ ಅರಣ್ಯ ಇಲಾಖೆ ಹಾಗೂ ತಾಲೂಕು ಕಚೇರಿ ಸೇರಿದಂತೆ ಮೂರು ಇಲಾಖೆಗಳಿಗೂ ಸೋಮವಾರ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಕಾಳೇನಹಳ್ಳಿ ಹಾಗೂ ಟಿ.ಎಂ.ಹೊಸೂರು ಗ್ರಾಮಗಳ ಮಹಿಳೆಯರು, ವೃದ್ಧರು ಸೇರಿದಂತೆ ಗ್ರಾಮಸ್ಥರು ಜಮಾವಣೆಗೊಂಡು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾ ಧರಣಿ ನಡೆಸಿ ಬಳಿಕ ಅಧಿಕಾರಿಗಳ ಬಳಿ ತಮ್ಮ ಸಮಸ್ಯೆಗಳನ್ನು ಮುಂದಿಟ್ಟು ತಕ್ಷಣ ಪರಿಹರಿಸಲು ಆಗ್ರಹಿಸಿದರು.

ಮೊದಲು ಗ್ರಾಮಾಂತರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದು, ಈ ವೇಳೆ ಕಾಳೇನಹಳ್ಳಿ ಗ್ರಾಮದ ಮುಖಂಡ ಮಹದೇವು ಮಾತನಾಡಿ, ಕಲ್ಲು ಗಣಿಗಾರಿಕೆಯಿಂದ ನೂರೆಂಟು ಸಮಸ್ಯೆ ಸೃಷ್ಟಿಯಾಗಿ ಗ್ರಾಮಸ್ಥರು ನಿತ್ಯ ಯಮಯಾತನೆ ಅನುಭವಿಸುತ್ತಿದ್ದಾರೆ. ರಾತ್ರಿ ವೇಳೆಯೂ ಕೆಲ ಕ್ರಷರ್‌ಗಳು ನಡೆಯುವ ಕಾರಣ ಉಂಟಾಗುವ ಭಾರಿ ಕರ್ಕಷ ಶಬ್ದಗಳಿಂದ ರಾತ್ರಿ ವೇಳೆ ಮನೆಯಲ್ಲಿ ಜನರು ಮಲಗಲು ಸಾಧ್ಯವಾಗದೆ ನೆಮ್ಮದಿ ಕಳೆದುಕೊಂಡಿದ್ದಾರೆ.

ರಸ್ತೆ ಭಾರದ ಮಿತಿಗಿಂತ 50-60 ಟನ್‌ಗಳ ಓವರ್ ಲೋಡ್ ಗಣಿ ಸಾಮಗ್ರಿಗಳನ್ನು ತುಂಬಿರುವ ಬೃಹತ್ ಟಿಪ್ಪರ್ ಲಾರಿಗಳು ಬೆಳಗ್ಗೆ-ರಾತ್ರಿ ಎನ್ನದೆ 300ಕ್ಕೂ ಹೆಚ್ಚು ವಾಹನಗಳು ಸಂಚರಿಸುವ ಕಾರಣ ಗ್ರಾಮದ ರಸ್ತೆಗಳುದ್ದಕ್ಕೂ ಆಳುದ್ದ ಗುಂಡಿಗಳು ಬಿದ್ದು ಹಾಳಾಗಿವೆ. ಇದರಿಂದ ಶಾಲೆಗೆ ತೆರಳುವ ವಿದ್ಯಾರ್ಥಿಗಳ ಸೈಕಲ್‌ಗಳು ಮತ್ತು ಜನರ ದ್ವಿಚಕ್ರ ವಾಹನಗಳು ಹಳ್ಳ-ಗುಂಡಿಗೆ ಬಿದ್ದು ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಈ ಮಾರ್ಗದಲ್ಲಿ ಆಗಮಿಸುವ ಬಸ್ಸುಗಳು ಇಲ್ಲಿ ಬರಲು ಹಿಂದೇಟು ಹಾಕುತ್ತಾರೆ. ಇನ್ನು ಗಣಿ ಧೂಳಿನಿಂದ ವೃದ್ಧರು ಮತ್ತು ಪುಟ್ಟ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತಿದ್ದು, ಕೆಮ್ಮು ಮತ್ತು ಉಸಿರಾಟದ ಸಮಸ್ಯೆ ಎದುರಾಗಿದೆ. ಗ್ರಾಮಸ್ಥರು ಮನೆಯಲ್ಲಿ ಕುಳಿತು ತಿನ್ನುವ ಅನ್ನದ ಮೇಲೂ ಈ ಧೂಳು ಕೂರುತ್ತಿವೆ. ಹೀಗಾಗಿ ಬದಲಿ ಮಾರ್ಗ ನಿರ್ಮಿಸಿ ಗ್ರಾಮಾಂತರ ಠಾಣೆ ಪೊಲೀಸರು ಇವುಗಳಿಗೆ ಮೊದಲು ಕಡಿವಾಣ ಹಾಕಬೇಕು ಎಂದು ರೈತ ಮಹಿಳೆಯರೊಂದಿಗೆ ಇನ್ಸ್‌ಪೆಕ್ಟರ್ ಬಿ.ಜಿ.ಕುಮಾರ್ ಅವರನ್ನು ಸುತ್ತುವರೆದು ತಮ್ಮ ಅಳಲು ತೋಡಿಕೊಂಡರು.

ಜನರ ಸಮಸ್ಯೆ ಆಲಿಸಿದ ಇನ್ಸ್‌ಪೆಕ್ಟರ್ ಬಿ.ಜಿ.ಕುಮಾರ್ ಸ್ಥಳಕ್ಕೆ ಅಲ್ಲಿನ ಕೆಲ ಕ್ರಷರ್ ಮಾಲೀಕರನ್ನು ಸಹ ಕರೆಸಿಕೊಂಡು ಗ್ರಾಮಸ್ಥರ ಸಮ್ಮುಖದಲ್ಲಿ ಮಾತನಾಡಿ, ಗ್ರಾಮದಲ್ಲಿ ರಾತ್ರಿ ವೇಳೆ ಕ್ರಷರ್ ಘಟಕ ನಡೆಸದಂತೆ ಹಾಗೂ ಗಣಿಗಾರಿಕೆಯ ಭಾರಿ ವಾಹನಗಳು ಸಂಚರಿಸದಂತೆ ತುರ್ತಾಗಿ ಕ್ರಮ ವಹಿಸುವಂತೆ ತಿಳಿಸಿ ಶೀಘ್ರವೇ ಸಮಸ್ಯೆ ಪರಿಹರಿಸಿಕೊಡುವ ಭರವಸೆ ನೀಡಿದರು.

ಬಳಿಕ ಅರಣ್ಯ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು ತಮ್ಮ ಗ್ರಾಮ ವ್ಯಾಪ್ತಿಯ ಸುತ್ತಮುತ್ತಲ ಅರಣ್ಯ ಭೂಮಿಗಳಲ್ಲಿ ನಡೆಯುತ್ತಿರುವ ಅಕ್ರಮ ಗಣಿಕಾರಿಕೆಗಳಿಗೆ ಕಡಿವಾಣ ಹಾಕಿ ಸೂಕ್ತ ಕ್ರಮವಹಿಸಲು ಕಚೇರಿಯಲ್ಲಿದ್ದ ಸಿಬ್ಬಂದಿಗೆ ತಾಕೀತು ಮಾಡಿದ ಜನರು, ನೇರ ತಾಲೂಕು ಕಚೇರಿಗೆ ಆಗಮಿಸಿ ಆಡಳಿತದ ಮುಂದೆ ಧರಣಿ ಕುಳಿತು ದಿಢೀರ್ ಪ್ರತಿಭಟನೆ ನಡೆಸಿದರು.

ರೈತ ಮುಖಂಡ ಮಂಜೇಶ್‌ಗೌಡ ಮಾತನಾಡಿ, ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿರುವ ಆರೋಪ ಸ್ಥಳಿಯ ಜನರಿಂದ ಮೇಲಿಂದ ಮೇಲೆ ಕೇಳಿಬಂದರೂ ತಾಲೂಕು ಆಡಳಿತ ಜಾಣ ಕುರುಡುತನ ವಹಿಸಿದೆ. ಅಕ್ರಮ ಕಲ್ಲು ಗಣಿಗಾರಿಕೆಯಿಂದ ಸರ್ಕಾರದ ಬೆಲೆ ಬಾಳುವ ಸಂಪತ್ತು ಲೂಟಿಯಾಗುವ ಜತೆಗೆ ಸ್ಥಳಿಯ ರೈತರ ಜಮೀನಿನಲ್ಲಿರುವ ಕೃಷಿ ಬೆಳೆಗಳು ಗಣಿಧೂಳಿನಿಂದ ಹಾನಿಗೊಂಡು ರೈತರು ನಷ್ಟ ಅನುಭವಿಸುತ್ತಿದ್ದಾರೆ. ಜತೆಗೆ ಅಕ್ರಮ ಕ್ವಾರಿಗಳಲ್ಲಿ ಮಾಡುವ ಬಾಂಬ್ ಬ್ಲಾಸ್ಟ್‌ನಿಂದ ಸಮೀಪದ ಗ್ರಾಮಗಳ ಬಡಜನರ ಮನೆಗಳು ಬಿರುಕು ಬಿಡುತ್ತಿವೆ. ಇಷ್ಟಾದರೂ ಈ ಬಗ್ಗೆ ಆಡಳಿತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಪ್ರತಿಭಟನೆಗಿಳಿದಿದ್ದು, ಇದಕ್ಕೆ ಮುಂದೆ ಜಿಲ್ಲಾಡಳಿತ ಭಾರಿ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಪ್ರತಿಭಟನಾಕಾರರ ಸಮಸ್ಯೆ ಆಲಿಸಿ ಮಾತನಾಡಿ, ಶೀಘ್ರವೇ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಜಿಲ್ಲಾಧಿಕಾರಿಗಳ ಗಮನಸೆಳೆದು ಸಂಬಂಧಪಟ್ಟ ಜಿಲ್ಲೆಯ ಎಲ್ಲ ಇಲಾಖೆಗಳಿಗೂ ಪತ್ರ ಬರೆದು ವಿವಿಧ ಅಧಿಕಾರಿಗಳ ನೇತೃತ್ವದ ಟಾಸ್ಕ್‌ಪೋರ್ಸ್ ಸಮಿತಿ ರಚಿಸಿ ಶೀಘ್ರವೇ ನಿಯಂತ್ರಣಕ್ಕೆ ತರಲಾಗುವುದು. ಶೀಘ್ರವೇ ಆ ವ್ಯಾಪ್ತಿಯ ರೈತರೊಂದಿಗೆ ಚರ್ಚಿಸಿ ಎದುರಾಗಿರುವ ಸಮಸ್ಯೆ ಪರಿಹರಿಸಿಕೊಡುವ ಜತೆಗೆ ಗ್ರಾಮಗಳ ಜನರ ಆರೋಗ್ಯ ಸುರಕ್ಷತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ರೈತ ಮುಖಂಡ ಕೂಡಲಕುಪ್ಪೆ ನಾಗೇಂದ್ರಸ್ವಾಮಿ, ದಸಂಸ ಮುಖಂಡ ರವಿಚಂದ್ರು, ಪ್ರಗತಿಪರ ಮುಖಂಡ ತೇಜಸ್, ಕಾಳೇನಹಳ್ಳಿ ಗ್ರಾಮದ ಮುಖಂಡ ಮಹೇಶ್, ಗ್ರಾಮಸ್ಥರಾದ ಉಮೇಶ್, ನಾಗಣ್ಣ, ಗಂಗಾಧರ, ಕಿರಣ, ಆದರ್ಶ, ಚಂದ್ರಶೇಖರ್, ಯಶೋದಮ್ಮ, ಕರ್ಪತಮ್ಮ, ಜಯಮ್ಮ, ಸುಧಾ ಇತರರು ಪಾಲ್ಗೊಂಡಿದ್ದರು.