ಜಿಲ್ಲೆ

ಕಗ್ಗಲಿಗುಂದಿ ಗಿರಿಜನರಿಗಿಲ್ಲ ಮೂಲಸೌಕರ್ಯಗಳು

ಹನೂರು: ಬಿರುಕು ಬಿಟ್ಟ ಗೋಡೆಗಳು, ಸೋರುವ ಛಾವಣಿ, ಗುಡಿಸಲಿನಲ್ಲೇ ವಾಸ, ಸಕಾಲಕ್ಕೆ ಬಾರದ ವೃದ್ಧಾಪ್ಯ ವೇತನ, ಅಂಗನವಾಡಿ ಇಲ್ಲದೇ ಶಾಲಾ ಪೂರ್ವ ಶಿಕ್ಷಣದಿಂದ ವಂಚಿತರಾದ ಪುಟಾಣಿಗಳು…

ಇದು ಹನೂರು ತಾಲೂಕಿನ ಚಿಕ್ಕಮಾಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನಲ್ಲಿರುವ ಕಗ್ಗಲಿಗುಂದಿ ಗ್ರಾಮದಲ್ಲಿ ಗಿರಿಜನರು ಎದುರಿಸುತ್ತಿರುವ ಸಮಸ್ಯೆಗಳು.

ಈ ಗ್ರಾಮದಲ್ಲಿ ಸುಮಾರು 50 ಗಿರಿಜನ ಕುಟುಂಬಗಳು ವಾಸಿಸುತ್ತಿದ್ದು, 250ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಇಲ್ಲಿನ ಜನರು ಕುರಿ ಸಾಕಣೆ ಹಾಗೂ ಕೂಲಿ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. 1990ರ ದಶಕದಲ್ಲಿ ಸರ್ಕಾರ ಇಲ್ಲಿನ ಕುಟುಂಬಗಳಿಗೆ ಮನೆ ನಿರ್ಮಿಸಿಕೊಟ್ಟಿತ್ತು. ಆದರೆ ಕಳೆದ 3 ವರ್ಷದಿಂದ 10ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ವಾಸಿಸಲು ಯೋಗ್ಯವಿಲ್ಲದಾಗಿದೆ. ಮನೆ ದುರಸ್ತಿಪಡಿಸುವಂತೆ ಅಥವಾ ಹೊಸದಾಗಿ ನಿರ್ಮಿಸಿಕೊಡುವಂತೆ ಗ್ರಾಪಂ ಅಧಿಕಾರಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಇಲ್ಲಿನ ಜನರು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಗಿರಿಜನರು ಶಿಥಿಲಾವಸ್ಥೆಯ ಮನೆಯಲ್ಲೇ ಕಷ್ಟಗಳ ನಡುವೆ ಜೀವನ ನಡೆಸುತ್ತಿದ್ದಾರೆ.

ಗ್ರಾಮದಲ್ಲಿ 30 ಮನೆಗಳಿದ್ದು, ಇದರಲ್ಲಿ ಸಿದ್ದೇಗೌಡ, ಮಾದೇವ, ಜಡೇಯಾ, ಬೇದೆಗೌಡ, ಸಣ್ಣಮಾದಯ್ಯ, ಹಿರೇಗೌಡ, ಪುಟ್ಟಮ್ಮ ಸೇರಿದಂತೆ 10ಕ್ಕೂ ಹೆಚ್ಚು ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಛಾವಣಿ ಸಂಪೂರ್ಣ ಶಿಥಿಲಗೊಂಡು ಕುಸಿಯುವ ಆತಂಕ ಎದುರಾಗಿದೆ. ಮಳೆ ಬಂದಾಗ ನೀರು ಸೋರುತ್ತದೆ. ಇದರಿಂದ ಕೆಲವರು ಗುಡಿಸಲು ನಿರ್ಮಿಸಿಕೊಂಡು ಹೀನಾಯದ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದರೆ, ಇನ್ನು ಕೆಲವರು ಶಿಥಿಲಾವಸ್ಥೆಯ ಛಾವಣಿಗೆ ಟಾರ್ಪಾಲಿನ್ ಹೊದಿಕೆ ಹಾಕಿಕೊಂಡಿದ್ದಾರೆ. ಚಿಕ್ಕಬಸವೇಗೌಡ ಎಂಬವರ ಮನೆಯ ಛಾವಣಿ ವರ್ಷದ ಹಿಂದೆಯೇ ಸಂಪೂರ್ಣ ಕುಸಿದು ಪಾಳು ಬಿದ್ದಿದೆ.

ಗ್ರಾಮದಲ್ಲಿ ಸುಮಾರು 30 ಮನೆಗಳಿದ್ದವು. ಆದರೆ ಇತ್ತೀಚೆಗೆ ಕುಟುಂಬದ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದು, ಇದಕ್ಕೆ ತಕ್ಕಂತೆ ವಾಸಕ್ಕೆ ಮನೆಯಿಲ್ಲ. ಪರಿಣಾಮ ಒಂದೇ ಮನೆಯಲ್ಲೇ ಇಕ್ಕಟ್ಟಾದ ಜಾಗದಲ್ಲಿ 2-3 ಕುಟುಂಬಗಳು ವಾಸಿಸಬೇಕಾದ ಪರಿಸ್ಥಿತಿ ಇದೆ. ಮನೆ ನಿಮಿರ್ಸಿಸಿಕೊಡುವಂತೆ ಗ್ರಾಪಂಗೆ ಹಲವು ಬಾರಿ ಮನವಿ ಮಾಡಿದ್ದರೂ ಮಂಜೂರು ಮಾಡಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ನಿವಾಸಿಗಳು ಅಳಲು ತೋಡಿದ್ದಾರೆ.

ಗ್ರಾಮದಲ್ಲಿ ಸುಮಾರು 10ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಆದರೆ ಅಂಗನವಾಡಿ ಕೇಂದ್ರವಿಲ್ಲದೆ ಶಾಲಾ ಪೂರ್ವ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಗರ್ಭೀಣಿಯರು ಹಾಗೂ ಬಾಣಂತಿಯರು ಪೌಷ್ಟಿಕ ಆಹಾರ ಪದಾರ್ಥಗಳನ್ನು ಪಡೆಯಬೇಕಾದರೆ ಸಮೀಪದ ದೊಡ್ಡ ಮಾಲಾಪುರ ಗ್ರಾಮಕ್ಕೆ ತೆರಳಬೇಕಿದೆ. ಈ ಹಿಂದೆ ಗ್ರಾಮದಲ್ಲಿ ಅಂಗನವಾಡಿ ನಿರ್ಮಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಪರಿಶೀಲಿಸಿ ಅಂಗನವಾಡಿ ಕೇಂದ್ರ ತೆರೆಯುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೂ ಭರವಸೆ ಈಡೇರಿಲ್ಲ.

ಗ್ರಾಮದಲ್ಲಿ ಸಾಮಾಜಿಕ ಭದ್ರತಾ ಯೋಜನೆಗೆ ಒಳಪಟ್ಟ 15 ಫಲಾನುಭವಿಗಳಿದ್ದಾರೆ. ಆದರೆ ಸಕಾಲಕ್ಕೆ ವೃದ್ಧಾಪ್ಯ ವೇತನ ಸಿಗುತ್ತಿಲ್ಲ. 3 ತಿಂಗಳಿಗೊಮ್ಮೆ ಅದರಲ್ಲೂ ಒಂದು ತಿಂಗಳ ಪಿಂಚಣಿ ಹಣ ಮಾತ್ರ ನೀಡಲಾಗುತ್ತಿದೆ. ಇದರಿಂದ ಜೀವನ ನಿರ್ವಹಣೆಗೆ ತುಂಬಾ ತೊಂದರೆಯಾಗಿದೆ. ಸಕಾಲಕ್ಕೆ ಪಿಂಚಣಿ ಸಿಗುವ ವ್ಯವಸ್ಥೆ ಮಾಡಿಕೊಡಬೇಕು ಎಂದು ಅಧಿಕಾರಿಗಳನ್ನು ಗ್ರಾಮದ ಜಡೇಗೌಡ ಒತ್ತಾಯಿಸಿದ್ದಾರೆ.
ಇನ್ನಾದರೂ ಇತ್ತ ಗಮನಹರಿಸಿ ಮನೆ ನಿರ್ಮಿಸಿಕೊಡುವುದರ ಮೂಲಕ ಗ್ರಾಮದ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.