ಜಿಲ್ಲೆ

ಕಗ್ಗತ್ತಲಲ್ಲಿ ಕಾರೆಕಾಡ್ ಗಿರಿಜನ ಕಾಲನಿ

ಗೋಣಿಕೊಪ್ಪ: ವಿದ್ಯುತ್ ಬಿಲ್ ಕಟ್ಟಲು ಹಣವಿಲ್ಲ, ಹಣ ಪಾವತಿಸದೆ ಕತ್ತಲು ಸರಿಯುವುದಿಲ್ಲ, ಕತ್ತಲಲ್ಲಿ ಮನೆಯಂಗಳಕ್ಕೂ ಬರುವ ಕಾಡಾನೆ ಹಿಂಡುಗಳಿಂದ ಜೀವ ಭಯ…


ಇದು ಅರ‌್ವತೊಕ್ಲು ಗ್ರಾಮದ ಕಾರೆಕಾಡ್ ಗಿರಿಜನ ಕಾಲನಿ ನಿವಾಸಿಗಳ ವಾಸ್ತವ ಸಂಗತಿ. 500 ರೂ.ಗೂ ಹೆಚ್ಚು ವಿದ್ಯುತ್ ಬಿಲ್ ಉಳಿಸಿಕೊಂಡ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಸರ್ಕಾರದ ನಿಯಮ ಕೂಡ ಬಡ ವರ್ಗದವರಿಗೆ ಜೀವಕ್ಕೂ ಕಂಟಕವಾಗಬಹುದು ಎಂಬ ಆತಂಕಕ್ಕೆ ಇಲ್ಲಿನ ಸಮಸ್ಯೆ ನಿದರ್ಶನವಾಗಿದೆ. ಅರ‌್ವತೊಕ್ಲು ಗ್ರಾಮ ಪಂಚಾಯಿತಿ ಕೂಡ ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದು, ಪಂಚಾಯಿತಿ ಅನುದಾನದ ಶೇ.25ರಷ್ಟು ಹಣವನ್ನು ಗಿರಿಜನ ಅಭಿವೃದ್ಧಿಗೆ ಮೀಸಲಿಟ್ಟಿದ್ದರೂ ಇಲ್ಲಿ ಅದು ಅನುಕೂಲಕ್ಕೆ ಬರುತ್ತಿಲ್ಲ. 40 ಯೂನಿಟ್ ಉಚಿತ ವಿದ್ಯುತ್ ಸಂಪರ್ಕ ಯೋಜನೆಗಳಿಗೂ ಇವರನ್ನು ಸೇರಿಸದೆ ಕಡೆಗಣಿಸುತ್ತಿರುವುದು ಬೇಸರದ ಸಂಗತಿ.


ಕಾಲನಿಯಲ್ಲಿ 3 ಮನೆಗಳಿವೆ. ಇವರಿಂದ ಸುಮಾರು 10 ಸಾವಿರ ವಿದ್ಯುತ್ ಬಿಲ್ ಬಾಕಿ ಇದೆ ಎಂಬ ಕಾರಣಕ್ಕೆ 2 ತಿಂಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಮನೆಯಲ್ಲಿ ಸುಮಾರು 80 ವರ್ಷದ ವೃದ್ಧೆ ಇದ್ದಾರೆ. ಉಳಿದವರು ಕೂಲಿಗೆ ಹೋಗುತ್ತಾರೆ. ಸುತ್ತಲೂ ಅರಣ್ಯ, ಕಾಫಿ ತೋಟ ಇದೆ. ಸುಮಾರು 12 ಮನೆಗಳಲ್ಲಿ ಇಲ್ಲಿ ಜೀವಿಸುತ್ತಿದ್ದವರು ಊರು ಬಿಟ್ಟು ಹೋಗಿದ್ದಾರೆ. ಅವರ ಮನೆಗಳು ಕುಸಿದು ಬಿದ್ದು, ಕಾಡು ಬೆಳೆದಿದೆ. ಕಾಡಾನೆಗಳು ತಂಗಲು ಉತ್ತಮ ವಾತಾವರಣ ಇರುವುದರಿಂದ ನಿತ್ಯ ಕಾಡಾನೆಗಳ ದರ್ಶನವಾಗುತ್ತದೆ. ಕಾಲನಿಯಲ್ಲಿರುವ ಏಕೈಕ ವಿದ್ಯುತ್ ಬೀದಿ ದೀಪವನ್ನು ಇತ್ತೀಚೆಗೆ ಅಳವಡಿಸಿರುವ ಸೋಲಾರ್ ದೀಪ ಇದೆ ಎಂಬ ಕಾರಣಕ್ಕೆ ಕಡಿತಗೊಳಿಸಲಾಗಿದೆ. ಸೋಲಾರ್ ದೀಪ ಕೂಡ ಕೆಟ್ಟಿರುವುದರಿಂದ ರಾತ್ರಿ ಇಡೀ ಕತ್ತಲು. ಮನೆಯಲ್ಲಿ ವಿದ್ಯುತ್ ಕಡಿತಗೊಂಡಿರುವುದರಿಂದ ಇಡೀ ಕಾಲನಿ ಕತ್ತಲಲ್ಲಿ ಮುಳುಗಿದೆ.


ಮೆಟ್ಟಿಲವರೆಗೂ ಬರುವ ಕಾಡಾನೆಗಳು: ಇಲ್ಲಿರುವ ಮನೆಗಳ ಮೆಟ್ಟಿಲಿನವರೆಗೂ ಕಾಡಾನೆಗಳು ಬರುತ್ತವೆ. ಬೆಳಕಿನಲ್ಲಿ ನೋಡಲು ಆಗುವುದಿಲ್ಲ. ನಾಯಿ ಬೊಗಳುವುದು, ಆನೆಗಳ ಚಲನವಲನ ಅರಿತು ನಾವು ಭಯದಿಂದ ಒಳಗೆ ಇರುತ್ತೇವೆ ಎಂದು ಇಲ್ಲಿನ ನಿವಾಸಿಗಳು ಭಯದಿಂದ ಹೇಳುತ್ತಾರೆ. ಕಾಫಿ ತೋಟ, ಕೀರೆಹೊಳೆ ಸಮೀಪ ಉಳಿದುಕೊಳ್ಳುವ ಆನೆಗಳು ಜೀವ ಭಯ ಹೆಚ್ಚಿಸುತ್ತಿದೆ.