ಬಳ್ಳಾರಿ : ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ (ರಾಬಕೊವಿ) ಹಾಲು ಉತ್ಪಾದಕರ ಒಕ್ಕೂಟವು ಲಕ್ಷಾಂತರ ಲೀ. ಉತ್ಪಾದನೆ ಸಾರ್ಮಥ್ಯದ ಮೆಗಾಡೈರಿ ಜಿಲ್ಲೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು. ಆದರೆ, ಹಲವು ವರ್ಷಗಳಿಂದ ನಿರ್ದೇಶಕರ ಹಾಗೂ ಅಧಿಕಾರಿಗಳ ಇಚ್ಛಾ ಕೊರತೆಯಿಂದ ಸ್ಥಳ ಗುರುತಿಸುವಲ್ಲಿ ವಿಳಂಬವಾಗಿದೆ.
ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳ ಹಿಂದಯೇ ಕೋಟಿಂತ್ಯರ ರೂ. ವೆಚ್ಚದಲ್ಲಿ ಮೆಗಾ ಡೈರಿ ನಿರ್ಮಾಣ ಮಾಡಲು ಸರ್ಕಾರ ಬಜೆಟ್‌ನಲ್ಲಿ ಮಂಡಿಸಲಾಗಿತ್ತು. ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ನಿಯೋಜಿಸಿ, ಡಿಪಿಆರ್ ಸಲ್ಲಿಸಿದರೆ ಸರ್ಕಾರದಿಂದ ಇಂತಿಷ್ಟು ಹಣ ನಿಗದಿ ಮಾಡಿ ಅನುದಾನ ಬಿಡುಗಡೆ ಮಾಡುವುದಾಗಿ ಸರ್ಕಾರ ಸೂಚಿಸಿತು. ಒಕ್ಕೂಟದ ಅಧಿಕಾರಿಗಳು ಮಾತ್ರ ಇಲ್ಲಿಯವರೆಗೆ ಸ್ಥಳ ಗುರುತಿಸುವಲ್ಲಿ ಕಾಲಹರಣ ಮಾಡಿದ್ದಾರೆ. ನಗರದ ಅಲ್ಲಂಭವನದ ಬಳಿ, ತಾಲೂಕಿನ ಶ್ರೀಧರಗಡ್ಡೆ , ಸಂಡೂರು ತಾಲೂಕಿನ ತೋರಣಗಲ್ ಬಳಿ ಮೆಗಾ ಡೈರಿ ನಿರ್ಮಾಣ ಮಾಡಲು ಸ್ಥಳ ಪರಿಶೀಲಿಸಿ ಬಳಿಕ ಕೈ ಬಿಟ್ಟಿರುವುದೆ ವಿಳಂಬಕ್ಕೆ ಮುಖ್ಯ ಕಾರಣವಾಗಿದೆ. ನಗರದ ಅಲ್ಲಂಭವನ ಹಾಗೂ ಶ್ರೀಧರಗಡ್ಡೆ ಬಳಿ ಮೆಗಾ ಡೈರಿಗೆ ಅಗತ್ಯವಾದಷ್ಟು ಸ್ಥಳ ಕೊರತೆಯಿಂದ ನಿರ್ಮಾಣ ಮಾಡಲು ಹಿಂದೆ ಸರಿಯಿತು. ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಮೂರು ಜಿಲ್ಲೆಗಳ ಹಾಲು ಉತ್ಪಾದಕರಿಗೆ ಸಾರಿಗೆ ವೆಚ್ಚದ ತಗ್ಗುವ ಉದ್ದೇಶದಿಂದ ತೋರಣಗಲ್ ಬಳಿ ನಿರ್ಮಾಣ ಮಾಡಲು ಉದ್ದೇಶಿಸಿದ್ದರು. ಆದರೆ, ರಾಷ್ಟ್ರೀಯ ಡೈರಿ ಅಭಿವೃದ್ಧಿ ಬೋರ್ಡ್(ಎನ್‌ಡಿಡಿಬಿ)ಯು ಸಮೀಪದಲ್ಲಿ ಕೈಗಾರಿಕ ಘಟಕಗಳಿದ್ದು, ಹಾಲಿಗೆ ಬೂದಿ ಬಿದ್ದು ಕೆಡಬಹುದು ಎಂದು ತಿರ್ಮಾನಿಸಿ ಸ್ಥಳ ರದ್ದು ಮಾಡಲಾಯಿತು. ಸದ್ಯ ತಾಲೂಕಿನ ಕೊಳಗಲ್ ಬಳಿಯ ಸರ್ಕಾರಿ ಜಮೀನಿನ ಹದಿನೈದು ಎಕರೆ ಪ್ರದೇಶದಲ್ಲಿ 2.92 ಕೋಟಿ ರೂ. ವೆಚ್ಚದಲ್ಲಿ ಸ್ಥಳ ಖರೀದಿಸಲು ಸರ್ಕಾರ ಒಕ್ಕೂಟಕ್ಕೆ ಪತ್ರ ಬರೆದು ಆದೇಶಿಸಿದೆ. ಆದರೆ, ಕೆಎಂಎಫ್ ಅಧ್ಯಕ್ಷ ಹಾಗೂ ಒಕ್ಕೂಟದ ಎಲ್ಲ ಸದಸ್ಯರ ಸೇರಿ ಸಭೆ ನಡೆಸಿ ಸ್ಥಳದ ಒಪ್ಪಿಗೆ ಪಡೆದರೆ ಮಾತ್ರ ಸ್ಥಳ ಖರೀದಿ ಮಾಡಬೇಕು. ಆದರೆ, ರಾಬಕೊವಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಗಳಿಗೆ ಇದೇ ಜುಲೈ 12 ರಂದು ನಡೆಯಬೇಕಿದ್ದ ಚುನಾವಣೆಗೆ ಧಾರವಾಡ ಹೈಕೋರ್ಟ್ ಪೀಠ ತಡೆ ನೀಡಿದೆ. ಕರೂರು ಹಾಲು ಉತ್ಪಾದಕರ ಸಹಕಾರ ಸಂಘ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಚುನಾವಣೆಗೆ ತಡೆ ನೀಡಿದೆ. ಈಗಾಗಲೇ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮೆಗಾ ಡೈರಿಯು ಕೋರ್ಟ್‌ನಿಂದ ತೀರ್ಪು ಬಂದ ಬಳಿಕ ನಿರ್ದೇಶಕ ಚುನಾವಣೆ ನಡೆದು ಸ್ಥಳ ಒಪ್ಪಿಗೆಗೆ ಇನ್ನೇಷ್ಟು ವರ್ಷ ಕಾಯಬೇಕು ಎಂಬುದು ಸಾರ್ವಜನಿಕರು ಕಾದು ನೋಡಬೇಕಿದೆ.
ಬಾಕ್ಸ್ : ಈಗಾಗಲೇ ಒಕ್ಕೂಟದ ಅಧ್ಯಕ್ಷ ಎಲ್.ಬಿ.ಪಿ. ಭೀಮಾನಾಯ್ಕ, ನಿರ್ದೇಶಕ ಎಚ್. ಮರಳಸಿದ್ದಪ್ಪ, ಇತ್ತೀಚೆಗೆ ವರ್ಗಾವಣೆಗೊಂಡ ಎಂಡಿ ಟಿ. ತಿರುಪತೆಪ್ಪ ಅವರ ಮೇಲೆ ಅಕ್ರಮ ನೇಮಕಾತಿ, ಹುದ್ದೆ ಪದೋನ್ನತಿ ಹಾಗೂ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಕಾನೂನು ರೀತಿಯಲ್ಲಿ ತನಿಖೆ ನಡೆಸಿ ಕ್ರಮವಹಿಸಬೇಕು ಎಂದು ಕರೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ. ಪ್ರತಾಪರೆಡ್ಡಿ ಕರ್ನಾಟಕ ಲೋಕಾಯುಕ್ತ ಕಚೇರಿ ದೂರು ನೀಡಿದ್ದಾರೆ. ನಿರ್ದೇಶಕ ಚುನಾವಣೆ ತಡೆ ಹಾಗೂ ಒಕ್ಕೂಟದಲ್ಲಿ ಅವ್ಯವಹಾರದ ಆರೋಪ ಸೇರಿದಂತೆ ಹಲವು ಗೊಂದಲಗಳ ನಡುವೆ ಜಿಲ್ಲೆಯಲ್ಲಿ ಮೆಗಾಡೈರಿ ನಿರ್ಮಾಣವಾಗುವುದೆ ಎಂಬ ಪ್ರಶ್ನೆಯಾಗಿದೆ.
ಕೋಟ್… ಒಕ್ಕೂಟದ ನಿರ್ದೇಶಕ ಚುನಾವಣೆಯನ್ನು ಭೌಗೋಳಿಕ ವಿಸ್ತರಣೆಯ ಪ್ರಕಾರ ನಡೆಸಬೇಕು. ಆದರೆ, ಒಕ್ಕೂಟವು ಹಳೆ ಬೈಲಾ ಪ್ರಕಾರ ಚುನಾವಣೆ ನಡೆಸಿದರೆ ಜಿಲ್ಲೆಗೆ ಅನ್ಯಾಯವಾಗಲಿದೆ.