ಜಿಲ್ಲೆ

ಕಗ್ಗಂಟಾಗಿ ಉಳಿದ ದೇವಸ್ಥಾನಗಳ ಆಸ್ತಿ ಸರ್ವೇ!

ಮಂಜುನಾಥ ಕೋಳಿಗುಡ್ಡ ಬೆಳಗಾವಿ

ಭೂ ದಾಖಲೆಗಳ ಕೊರತೆ, ತಾಂತ್ರಿಕ ಸಮಸ್ಯೆ, ಹಣಕಾಸಿನ ಅಭಾವ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಾಲಯಗಳ ಆಸ್ತಿ ಸರ್ವೇ ಹಲವು ವರ್ಷಗಳಿಂದ ಕಗ್ಗಂಟಾಗಿ ಉಳಿದಿದೆ. ಇದರಿಂದ ನಿರ್ವಹಣೆ, ಸಂರಕ್ಷಣೆ ಇಲ್ಲದೆ ಆಸ್ತಿಗಳು ಒತ್ತುವರಿ, ಖಾಸಗಿ ವ್ಯಕ್ತಿಗಳ ಪಾಲಾಗಿವೆ. ಕೆಲ ಭಾಗದಲ್ಲಿ ದೇವಸ್ಥಾನಗಳಿಗೆ ಸೇರಿದ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿಗಳು ಖಾಸಗಿ ವ್ಯಕ್ತಿಗಳ ಅಧೀನಕ್ಕೆ ಒಳಪಟ್ಟಿವೆ.

ಜಿಲ್ಲೆಯಲ್ಲಿ ಅಂದಾಜು 4,356 ದೇವಸ್ಥಾನಗಳಿವೆ. ಇವುಗಳ ಸರ್ವೇ ಮಾಡಲು ರಾಜ್ಯ ಸರ್ಕಾರವು 2021ರಲ್ಲಿ ಆದೇಶ ಮಾಡಿತ್ತು. ಆದರೆ, ಇದಕ್ಕಾಗಿ ಮುಜರಾಯಿ ಇಲಾಖೆ ಪ್ರತ್ಯೇಕ ಅನುದಾನ ಮೀಸಲಿಟ್ಟಿಲ್ಲ. ಸರ್ವೇ ಮಾಡಲು ಆಯಾ ದೇವಸ್ಥಾನಗಳು ಸರ್ವೇ ಇಲಾಖೆಗೆ ಮುಂಗಡವಾಗಿ ಹಣ ಕಟ್ಟಿಲ್ಲ. ಜತೆಗೆ ಸರ್ವೇ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯೇ ಸರ್ವೇ ಕಾರ್ಯ ನಡೆಸಲು ಕಗ್ಗಂಟಾಗಿ ಉಳಿಯಲು ಪ್ರಮುಖ ಕಾರಣ ಎನ್ನಲಾಗಿದೆ.

ಬೆಳಗಾವಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಿಂದ ಎ, ಬಿ ಮತ್ತು ಸಿ ಕೆಟಗರಿಯ ದೇವಸ್ಥಾನಗಳ ಒಡೆತನದಲ್ಲಿರುವ ಕೃಷಿ ಭೂಮಿ, ವಾಣಿಜ್ಯ ನಿವೇಶನ, ಮಳಿಗೆಗಳು, ಕಟ್ಟಡಗಳು, ವಿವಿಧ ಆಸ್ತಿಗಳು ಎಲ್ಲೆಲ್ಲಿವೆ ಎನ್ನುವ ಕುರಿತು ಮಾಹಿತಿ ಸಂಗ್ರಹಿಸುವ ಕಾರ್ಯ ಅರ್ಧಕ್ಕೆ ಮೊಟಕುಗೊಂಡಿದೆ. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಭಕ್ತರ ಕಾಣಿಕೆ, ದಾನಿಗಳಿಂದ ವಾರ್ಷಿಕ ಕೋಟ್ಯಂತರ ರೂ. ಆದಾಯ ಬರುತ್ತಿದೆ.

ಮತ್ತೊಂದೆಡೆ ದೇವಸ್ಥಾನ ಒಡೆತನದ ವಾಣಿಜ್ಯ ಕಟ್ಟಡಗಳಿಂದ ಪ್ರತಿ ತಿಂಗಳು ಬಾಡಿಗೆ ಮೂಲಕ ಲಕ್ಷಾಂತರ ರೂ. ಆದಾಯ ಬರುತ್ತಿದೆ. ಈ ಮಧ್ಯೆ ದೇವಸ್ಥಾನಗಳ ಆಡಳಿತ ಮಂಡಳಿ, ಪೂಜಾರಿಗಳ ನಡುವಿನ ಸಮನ್ವಯ ಕೊರತೆಯಿಂದಾಗಿ ಆದಾಯ ಸೋರಿಕೆಯಾಗುತ್ತಿದೆ. ದೇವಾಲಯಗಳ ಹೆಸರಿನಲ್ಲಿ ನೂರಾರು ಎಕರೆ ಆಸ್ತಿಗಳಿದ್ದರೂ, ಅವುಗಳನ್ನು ಖಾಸಗಿ ವ್ಯಕ್ತಿಗಳು ನಿರ್ವಹಣೆ ಮಾಡುತ್ತಿದ್ದಾರೆ. ಸರ್ಕಾರವು ಆಸ್ತಿಗಳ ಸರ್ವೇ ನಡೆಸಿ ಸಂರಕ್ಷಣೆಗೆ ಕ್ರಮ ಜರುಗಿಸಿದರೆ ಎಲ್ಲ ದೇವಸ್ಥಾನಗಳು ಆರ್ಥಿಕವಾಗಿ ಸದೃಢಗೊಳ್ಳುತ್ತವೆ. ಅಲ್ಲದೆ, ನಿರ್ವಹಣೆಗಾಗಿ ಸರ್ಕಾರದ ಅನುದಾನದ ಅವಶ್ಯಕತೆ ಬರುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಭಿವೃದ್ಧಿಗೆ ಸರ್ಕಾರದಿಂದ ಕೋಟ್ಯಂತರ ರೂ. ವೆಚ್ಚ: ಜಿಲ್ಲೆಯಲ್ಲಿನ 4,356 ದೇವಸ್ಥಾನಗಳ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು 2020 ರಿಂದ 2023 ನಡುವಿನ ಅವಧಿಯಲ್ಲಿ ಅಂದಾಜು 25.45 ಕೋಟಿ ರೂ. ಖರ್ಚು ಮಾಡಿರುವುದು ದಾಖಲೆಗಳಲ್ಲಿದೆ. ರಾಯಬಾಗದ ಚಿಂಚಲಿ ಮಾಯಕ್ಕ, ಸವದತ್ತಿ ತಾಲೂಕಿನ ಯಲ್ಲಮ್ಮ, ಸೊಗಲ ಸೋಮೇಶ್ವರ, ಗೊಡಚಿ ವೀರಭದ್ರ ದೇವಸ್ಥಾನ, ಪಂತ ಬಾಳೇಕುಂದ್ರಿ, ಅನಗೋಳದ ಹರಿ ಮಂದಿರದ ಸೇರಿ ಇನ್ನಿತರ ಬಿ ದರ್ಜೆಯ ದೇವಸ್ಥಾನಗಳು ವಾರ್ಷಿಕ ಕೋಟ್ಯಂತ ರೂ. ಆದಾಯ ಹೊಂದಿವೆ. ಆದರೆ, ವಾಸ್ತವದಲ್ಲಿ ದೇವಸ್ಥಾನಗಳು ಮೂಲಸೌಕರ್ಯಗಳಾದ ಕುಡಿಯುವ ನೀರು, ವಸತಿ ಇತರ ಸೌಲಭ್ಯಗಳಿಂದ ವಂಚಿತವಾಗಿವೆ ಎಂದು ಭಕ್ತರಾದ ವಿಠ್ಠಲ ಅನಗೋಳ, ಶ್ರೀಕಾಂತ ಪೂಜಾರ, ರಮೇಶ ಗೌಡರ ಅವರು ಸರ್ಕಾರದ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇವಾಲಯಗಳ ಸ್ವತ್ತು ಮಾರಾಟ: ಬ್ರಿಟಿಷರು, ರಾಜ ಮಹಾರಾಜರ ಕಾಲದಲ್ಲಿ ಆಯಾ ಗ್ರಾಮ ದೇವತೆ ದೇವಾಲಯಗಳಿಗಾಗಿ ಭೂಮಿ ಮೀಸಲಿಟ್ಟಿದ್ದರು. ಕೆಲ ರಾಜರು ನೂರಾರು ಎಕರೆ ದಾನ ಮಾಡಿದ್ದರು. ಅಲ್ಲದೆ ಕೆಲವು ಕಡೆ ದೇವಾಲಯಗಳ ನಿರ್ವಹಣೆಗಾಗಿಯೇ ಕೃಷಿ ಜಮೀನುಗಳನ್ನು ಆಸ್ತಿಯನ್ನಾಗಿ ಮೀಸಲಿಟ್ಟಿದ್ದರು. ಆದರೆ, 1950ರಿಂದ ಬಳಿಕ ದೇವಾಲಯಗಳಿಗೆ ಮೀಸಲಿಟ್ಟಿರುವ ನೂರಾರು ಎಕರೆ ಆಸ್ತಿಯನ್ನು ಆಯಾ ದೇವಾಲಯಗಳ ಪೂಜಾರಿಗಳು ಹಂಚಿಕೊಂಡು ಮಾರಾಟ ಮಾಡಿದ್ದಾರೆ. ಕೆಲವರು ದೇವಸ್ಥಾನಗಳ ಆಸ್ತಿಗಳನ್ನು ಖಾಸಗಿ ವ್ಯಕ್ತಿಗಳು ನಕಲಿ ದಾಖಲೆ ಸೃಷ್ಟಿಸಿ ತಮ್ಮಂತೆ ಮಾಡಿಕೊಂಡಿದ್ದಾರೆ. ಮುಜರಾಯಿ ಇಲಾಖೆಯು ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಮಾತ್ರ ದೇವಾಲಯಗಳ ಆಸ್ತಿ ಸಂರಕ್ಷಣೆ ಸಾಧ್ಯ.