ಮಳವಳ್ಳಿ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರೇ ಪೀಠದಿಂದ ಎದ್ದು ಬಂದು ಕಕ್ಷಿದಾರರಿದ್ದ ಜಾಗಕ್ಕೆ ತೆರಳಿ ದಾವೆ ಇತ್ಯರ್ಥಪಡಿಸಿದ ಅಪರೂಪ ಸನ್ನಿವೇಶಕ್ಕೆ ಪಟ್ಟಣದ ನ್ಯಾಯಾಲಯ ಇತ್ತೀಚೆಗೆ ಸಾಕ್ಷಿಯಾಯಿತು.
ಪಟ್ಟಣದ ನ್ಯಾಯಾಲಯದಲ್ಲಿ ಆಯೋಜಿಸಿದ್ದ ಲೋಕ ಅದಾಲತ್‌ನಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾವೆಗಳನ್ನು ರಾಜಿ ಮೂಲಕ ಬಗೆಹರಿಸಲು ನ್ಯಾಯಾಧೀಶರು ಮುಂದಾಗಿದ್ದರು. ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದ ಕಕ್ಷಿದಾರೊಬ್ಬರು ಈ ಸಮಯದಲ್ಲಿ ನ್ಯಾಯಾಲಯದ ಒಳಗೆ ವಿಚಾರಣೆಗೆ ಭಾಗವಹಿಸಲು ಸಾಧ್ಯವಾಗದೆ ಹೊರಗೆ ಇರುವುದಾಗಿ ಕಕ್ಷಿದಾರರ ಪರ ವಕೀಲ ನ್ಯಾಯಾಧೀಶರಿಗೆ ತಿಳಿಸಿದರು.
ವಿಷಯ ತಿಳಿದ ಅಪರ ಸಿವಿಲ್ ನ್ಯಾಯಾಧೀಶೆ ಕಾವ್ಯಶ್ರೀ ನ್ಯಾಯ ಪೀಠದಿಂದ ಎದ್ದು ಕಕ್ಷಿದಾರರಿದ್ದ ಸ್ಥಳಕ್ಕೆ ಆಗಮಿಸಿ ಅಹವಾಲು ಆಲಿಸಿದ ಬಳಿಕ ದಾವೆ ಇತ್ಯರ್ಥಪಡಿಸಿದರು. ನ್ಯಾಯಾಧೀಶರ ಈ ನಡೆಗೆ ವಕೀಲರು ಹಾಗೂ ಕಕ್ಷಿದಾರರು ಶ್ಲಾಘನೆ ವ್ಯಕ್ತಪಡಿಸಿದರು.
ಸಣ್ಣಪುಟ್ಟ ಪ್ರಕರಣಗಳನ್ನು ಬಗೆಹರಿಸಿಕೊಂದು ವ್ಯಾಜ್ಯಮುಕ್ತ ಜೀವನ ನಿರ್ವಹಿಸಬೇಕು. ಪ್ರಕರಣಗಳಿಗೆ ಪರಿಹಾರ ಕಂಡುಕೊಳ್ಳುವುದರಿಂದ ನ್ಯಾಯಾಲಯಕ್ಕೆ ಅಲೆದಾಡುವುದು ತಪ್ಪುತ್ತದೆ. ಜತೆಗೆ ಹಣ ಹಾಗೂ ಸಮಯ ಉಳಿಯಲಿದೆ ಎಂದು ನ್ಯಾಯಾಧೀಶೆ ಕಾವ್ಯಶ್ರೀ ಸಲಹೆ ನೀಡಿದರು.